ಚಿಕ್ಕಮಗಳೂರು:
ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಕುದುರೆಮುಖ ವಲಯದ ಭದ್ರಾ ನದಿ ಪಾತ್ರದಲ್ಲಿ ಸಿನಿಮಾ ಚಿತ್ರೀಕರಣ ನಡೆದು ಅಲ್ಲಿನ ಅರಣ್ಯ ಪ್ರದೇಶ ಹಾಗೂ ವನ್ಯಜೀವಿಗಳ ಆವಾಸಸ್ಥಾನ ಮತ್ತು ಅವುಗಳ ನೆಮ್ಮದಿಯ ಜೀವನಕ್ಕೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಭದ್ರಾ ವೈಲ್ಡ್ ಆಫ್ ಕನ್ಸರ್ವೇಷನ್ ಟ್ರಸ್ಟ್ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರು ಆರೋಪ ಮಾಡಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ತುಂಗಾ, ಭದ್ರಾ, ನೇತ್ರಾವತಿ ಇನ್ನು ಮುಂತಾದ ನದಿಗಳು ಮತ್ತು ಉಪ ನದಿಗಳು ಹುಟ್ಟುತ್ತವೆ. ಹುಲಿ, ಚಿರತೆ, ಆನೆ ಸೇರಿದಂತೆ ಅನೇಕ ಸಸ್ತನಿಗಳು ಮತ್ತು ಸರಿಸೃಪಗಳು, ವಿನಾಶದ ಅಂಚಿನಲ್ಲಿರುವ ಸಿಂಗಳಿಕಗಳು ಸೇರಿದಂತೆ ಹಲವು ವನ್ಯಜೀವಿಗಳು ಇಲ್ಲಿ ವಾಸಿಸುತ್ತಿವೆ. ಪಶ್ಚಿಮಘಟ್ಟದ ಅತೀ ಸೂಕ್ಷ್ಮ ಪ್ರದೇಶವಾಗಿದೆ. ನಿತ್ಯ ಹರಿದ್ವರ್ಣ ಕಾಡು, ಶೋಲಾ ಕಾಡು ಮತ್ತು ಹುಲ್ಲುಗಾವಲುಗಳಿಂದ ಕುದುರೆಮುಖ ಆವೃತವಾಗಿದೆ.
ಇಂತಹ ಪರಿಸರದಲ್ಲಿ ವಾಣಿಜ್ಯ ಸಿನಿಮಾಗಳ ಚಿತ್ರೀಕರಣವನ್ನು ಎಲ್ಲಾ ಕಾನೂನು ಕಾಯ್ದೆ, ನಿಬಂಧನೆಗಳನ್ನು ಗಾಳಿಗೆ ತೂರಿ ಚಿತ್ರೀಕರಣ ನಡೆಸಲಾಗಿದೆ. ಈ ವೇಳೆ ಭದ್ರಾ ನದಿ ಮೂಲದಲ್ಲಿ ಕೃತಕ ಸೆಟ್ಗಳನ್ನು ನಿರ್ಮಿಸಿ, ಖಾಸಗಿ ದೋಣಿಗಳನ್ನು ಬಳಸಿ, ಇಡೀ ದಿನ ಉದ್ಯಾನವನದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಇದರಿಂದ ಅರಣ್ಯದ ವಾತಾವರಣ ಕಲುಷಿತಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ..
ಇನ್ನು ಮುಂದೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಯಾವುದೇ ವಾಣಿಜ್ಯ ಚಲನಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ಕೊಡಬಾರದು. ವನ್ಯಜೀವಿಗಳ ನೆಮ್ಮದಿಯ ಬದುಕಿಗೆ ಭಂಗ ತರುವ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದೆಂದು ಒತ್ತಾಯ ಮಾಡಿದ್ದಾರೆ……