ರಾಜ್ಯದ ಒಬಿಸಿ ಪಟ್ಟಿಯಲ್ಲಿನ ಬೇಡರು, ಬೆಂಡರ, ಬೇರಾಡ, ನಾಯಕ ಮಕ್ಕಳು, ವಾಲ್ಮೀಕಿ ಮಕ್ಕಳು, ವೇದನ ಪಾಳೇಗಾರ, ರಾಮೋಶಿ, ಅರಸ ನಾಯಕ ಈ ಜಾತಿಯ ಜನರಿಗೆ ಎಸ್ಟಿ ಪ್ರಮಾಣ ಪತ್ರ ನೀಡಬಾರದು ಎಂದು ಆಗ್ರಹಿಸಿ ಹೈ.ಕ.ಗೊಂಡ, ಕಾಡು ಕುರುಬ, ಟೋಕರಿಕೋಲಿ, ಕೋಲಿ ಮತ್ತು ಕಬ್ಬಲಿಗ ಒಕ್ಕೂಟದ ಕಾರ್ಯಕರ್ತರು ಕಲಬುರಗಿಯಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಾಯ್ಕಡ ಉಪಜಾತಿ ಜನರಿಗೆ ಎಸ್ಟಿ ಪ್ರಮಾಣ ಪತ್ರ ನೀಡುವಾಗ ಮುಖ್ಯ ಜಾತಿಗೆ ಸೇರಿದ್ದಾರೋ, ಇಲ್ಲವೋ ಎಂಬುದನ್ನು ಪರಿಶೀಲಿಸಿ ಜಾತಿ ಪ್ರಮಾಣ ಪತ್ರ ನೀಡಬೇಕು. ರಾಜ್ಯ ಸರ್ಕಾರ ಗೊಂಡ ಪರ್ಯಾಯ ಪದ ಕುರುಬ ಮತ್ತು ಕೋಲಿ ಕಬ್ಬಲಿಗ, ಅದರ ಪರ್ಯಾಯ 39 ಉಪ ಜಾತಿಗಳು ಎಸ್ಟಿ ಪಂಗಡಕ್ಕೆ ಅರ್ಹರು ಎಂದು ಕುಲಶಾಸ್ತ್ರೀಯ ಅಧ್ಯಯನದ ವರದಿಯೊಂದಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ಮಾಡಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಕೇಂದ್ರ ಸರ್ಕಾರ ಈ ಜನರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಸಂವಿಧಾನಬದ್ಧ ಗೊಂಡ ಅನುಕ್ರಮ ಸಂಖ್ಯೆ 9, ಕಾಡುಕುರುಬ ಅನುಕ್ರಮ ಸಂಖ್ಯೆ 16, ಟೊಕರಿ ಕೋಲಿ ಸಂಖ್ಯೆ 22 ಇವರಿಗೆ ಎಸ್ಟಿ ಜಾತಿ/ಸಿಂಧುತ್ವ ಪ್ರಮಾಣಪತ್ರ ನೀಡಲು ನಿರ್ದೇಶಿಸಬೇಕು. ಗೊಂಡ, ಕಾಡುಕುರುಬ, ಟೊಕರಿ ಕೋಲಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವಂತೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಈಗಿರುವ ಕರ್ನಾಟಕ ಎಸ್ಟಿ ಮೀಸಲಾತಿ ಶೇ.3ರಷ್ಟಿದ್ದು, ಇದನ್ನು ಬೇರೆ ರಾಜ್ಯದ ಮಾದರಿಯಲ್ಲಿ ಶೇ.7.5ಕ್ಕೆ ಹೆಚ್ಚಿಸಬೇಕು. ಒಬಿಸಿ ಪಟ್ಟಿಯಲ್ಲಿ ಬರುವ ಬೇಡರು ಮತ್ತು ಅವರ ಉಪಜಾತಿ ಜನ ಸುಳ್ಳು ಎಸ್ಟಿ ಜತಿ ಪ್ರಮಾಣಪತ್ರ ಪಡೆದು ಎಸ್ಸಿ/ಎಸ್ಟಿ ದೌರ್ಜನ್ಯತಡೆ ಕಾಯಿದೆ ಅಡಿ ಸುಳ್ಳು ದೂರು ನೀಡಿ ಪ್ರಕರಣ ದಾಖಲಿಸಿ ಸರ್ಕಾರದ ಲಾಭ ಪಡೆಯುವುದನ್ನು ತಡೆಯಬೇಕು ಎಂದು ಕೋರಿದರು.ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಕಲಬುರಗಿ ಪ್ರಾದೇಶಿಕ ಆಯುಕ್ತರ ಮೂಲಕ ಸಲ್ಲಿಸಿದರು…..