ಬೆಂಗಳೂರು:
ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಹಿಂದಿನ ಸಿದ್ದರಾಮಯ್ಯ ಸರಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಕಾಂಗ್ರೆಸ್ ಹೈಕಮಾಂಡ್‌ನ ಬದಲಾದ ರಾಜಕೀಯ ತಂತ್ರಗಾರಿಕೆಯ ಒಂದು ಭಾಗವೇ?
ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಐದು ವರ್ಷಗಳ ಕಾಲ ಎಡಪಂಥದತ್ತ ಸಂಪೂರ್ಣ ವಾಲಿದಂತೆ ಬಿಂಬಿತವಾದ ಕಾಂಗ್ರೆಸ್ ಸಿದ್ಧಾಂತವನ್ನು, ಎಡದಿಂದ ಮೃದು ಹಿಂದುತ್ವದೆಡೆಗೆ ನೇರವಾಗಿಸುವ ಯೋಜನೆಯ ಭಾಗವಾಗಿ ತಂತ್ರಗಾರಿಕೆ ರೂಪಿತವಾಗಿರಬಹುದು ಎಂಬ ವಿಶ್ಲೇಷಣೆಗಳೇ ರಾಜಕೀಯ ವಲಯದಲ್ಲಿದೆ. ಕಾಂಗ್ರೆಸ್ ಆಂತರಿಕ ವಲಯದಲ್ಲಂತೂ ಈ ಬಗ್ಗೆ ಗಂಭೀರ ಸ್ವರೂಪದ ಚಿಂತನ ಮಂಥನ ನಡೆದಿದೆ. ಸಿದ್ದು ಚಿಂತನೆಯ ಛಾಯೆ ಹೊಂದಿರುವ ಕಾಂಗ್ರೆಸ್ ವರ್ಚಸ್ಸನ್ನು ಬದಲಿಸುವ ಪ್ರಯತ್ನ ಎಂದೇ ಹೇಳಲಾಗುತ್ತಿದೆ. ವೀರಶೈವ ಲಿಂಗಾಯತ ಮತಗಳನ್ನು ಸೆಳೆಯಲು ನಡೆಸಿರುವ ಕಸರತ್ತು ಇದು ಎಂಬ ವ್ಯಾಖ್ಯಾನವಿದೆ.
ಒಟ್ಟಿನಲ್ಲಿ ಮೇಲ್ನೋಟಕ್ಕೆ ಈ ಹೇಳಿಕೆ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಪರ-ವಿರೋಧ ಅಲೆ ಭುಗಿಲೇಳುವಂತೆ ಮಾಡಿದೆಯಾದರೂ, ಇದು ಶಿವಕುಮಾರ್ ಅವರ ವೈಯಕ್ತಿಕ ನೆಲೆಯಲ್ಲಿ ರೂಪುಗೊಂಡ ವ್ಯಾಖ್ಯಾನವಲ್ಲ ಎಂಬ ಅಭಿಪ್ರಾಯವೇ ಬಲಗೊಳ್ಳುತ್ತಿದೆ. ಮುಂದೆ 2019ರಲ್ಲಿ ಎದುರಾಗುವ ಲೋಕಸಭಾ ಚುನಾವಣೆ ಹಾಗೂ ಭವಿಷ್ಯದಲ್ಲಿ ಎದುರಾಗುವ ರಾಜಕೀಯ ಸ್ಥಿತ್ಯಂತರಗಳ ಬಗ್ಗೆ ಪೂರ್ವ ವಿಶ್ಲೇಷಣೆ ನಡೆಸುತ್ತಿರುವ ಕಾಂಗ್ರೆಸ್ ವರಿಷ್ಠರ ಸೂಚನೆ ಮೇರೆಗೇ ಈ ವಿವಾದಾತ್ಮಕ ಹೇಳಿಕೆಯನ್ನು ಶಿವಕುಮಾರ್ ನೀಡಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.