Breaking News

ತಿಂಗಳಿಗೊಮ್ಮೆ ಹಾಸ್ಟೆಲ್ ಭೇಟಿ..!

ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಎಂದು ಮನವಿ....

SHARE......LIKE......COMMENT......

ಕೋಲಾರ: 

ಜಿಲ್ಲೆಯ ಹಾಸ್ಟೆಲ್​ಗಳಿಗೆ ಕನಿಷ್ಠ ತಿಂಗಳಿಗೊಮ್ಮೆ ಸಿಪಿಐ, ಪಿಎಸ್​ಐ ಭೇಟಿಗೆ ಕ್ರಮ ಜರುಗಿಸುವ ಭರವಸೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಸೆಪಟ್ ಉತ್ತಮ ಸಮಾಜ ನಿರ್ವಣಕ್ಕಾಗಿ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.

ಕೋಲಾರ ಗ್ರಾಮಾಂತರ ಠಾಣೆ ಆವರಣದಲ್ಲಿ ಭಾನುವಾರ ದಲಿತ ಮುಖಂಡರೊಂದಿಗಿನ ಸಭೆಯಲ್ಲಿ ಕೆಲ ಹಾಸ್ಟೆಲ್​ಗಳಲ್ಲಿ ಬೇರೆ ಬೇರೆ ಚಟುವಟಿಕೆ ನಡೆಯುತ್ತಿದೆ. ಹೀಗಾಗಿ ತಿಂಗಳಿಗೊಮ್ಮೆ ಪಿಎಸ್​ಐ ಅಥವಾ ಸಿಪಿಐ ಭೇಟಿ ನೀಡಿ ಪರಿಶೀಲಿಸಬೇಕೆಂದು ದಸಂಸ ಜಿಲ್ಲಾಧ್ಯಕ್ಷ ಹೂಹಳ್ಳಿ ನಾಗೇಶ್ ನೀಡಿದ ಸಲಹೆಗೆ ಸಮ್ಮತಿಸಿದ ಎಸ್ಪಿ, ಪೊಲೀಸ್ ಅಧಿಕಾರಿಗಳನ್ನು ಕಳುಹಿಸಿಕೊಡುವುದಾಗಿ ತಿಳಿಸಿದರು.

ಪ್ರತಿಭಟಿಸಲು ನಿಮಗೆ ಹಕ್ಕಿದೆ, ನಾವೂ ಸಹಕರಿಸುತ್ತೇವೆ. ದಿಢೀರ್ ಎಂದು ಮಾಡಿದರೆ ಹೇಗೆ? ಆಯಾ ಭಾಗದ ಪಿಎಸ್​ಐಗಳಿಗೆ ಮುಂಚಿತವವಾಗಿ ಮಾಹಿತಿ ನೀಡಿ ಎಂದು ತಿಳಿಸಿದರು.ದಲಿತರ ಸಭೆಗಳನ್ನು ಕಾಟಾಚಾರಕ್ಕೆಂಬಂತೆ ನಡೆಸಬಾರದು ಎಂದು ದಲಿತ ಮುಖಂಡ ಡಾ. ಚಂದ್ರಶೇಖರ್ ಒತ್ತಾಯಿಸಿದರು.

ಮುಖಂಡ ಟಿ.ವಿಜಯಕುಮಾರ್ ಮಾತನಾಡಿ, ಪಿಟಿಸಿಎಲ್ ಪ್ರಕರಣಗಳಲ್ಲಿ ದಲಿತರಿಗೆ ಜಮೀನು ಮರುಮಂಜೂರಾತಿ ಮಾಡಿ ಉಪವಿಭಾಗಾಧಿಕಾರಿ ಆದೇಶಿಸಿದರೂ ಜಮೀನು ಬಿಡಿಸಿಕೊಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿಲ್ಲ ಎಂದರು.

ಜಮೀನು ಬಿಡಿಸುವ ಸಂದರ್ಭದಲ್ಲಿ ಕಂದಾಯ ಅಧಿಕಾರಿಗಳು ಜತೆಗಿದ್ದು, ಚೆಕ್​ಬಂದಿ ಗುರುತಿಸಿ ನೀಡಿದರೆ ರಕ್ಷಣೆ ಒದಗಿಸುತ್ತೇವೆ. ಈ ಬಗ್ಗೆ ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಎಸ್ಪಿ ದೂರಿದರು.

ನಗರದ ಗಾಂಧಿನಗರದಲ್ಲಿ ಕೆಲ ಯುವಕರು ಗಾಂಜಾ ಸೇವನೆಯಲ್ಲಿ ತೊಡಗಿದ್ದಾರೆ. ಹೆಚ್ಚು ದಲಿತರಿರುವ ಭಾಗಗಳಲ್ಲೇ ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ ಎಂದು ಮುಖಂಡ ಚೇತನ್​ಬಾಬು ದೂರಿದರು. ಮಾದಕದ್ರವ್ಯ ಪ್ರಕರಣಗಳ ಬಗ್ಗೆ ನಾನೇ ಪರಿಶೀಲನೆ ನಡೆಸುತ್ತೇನೆ. ಮದ್ಯ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಲು ಅಬಕಾರಿ ಇಲಾಖೆ ಇದೆ, ಆದರೂ ಹಳ್ಳಿಗಳ ಪಟ್ಟಿ ನೀಡಿದರೆ ಕ್ರಮ ತೆಗದುಕೊಳ್ಳುವುದಾಗಿ ಎಸ್ಪಿ ಭರವಸೆ ನೀಡಿದರು.

ದಲಿತರು ಹೆಚ್ಚು ವಾಸವಿರುವ ಕೋಡಿಕಣ್ಣೂರು ಭಾಗದಲ್ಲಿ ಕೆರೆ ಬದಿಯಲ್ಲೇ ಮಾಂಸ, ಕೋಳಿ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ಅನೇಕ ಬಾರಿ ನಗರಸಭೆಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ನಗರಸಭೆಯೂ ಕಸ ತಂದು ಕೆರೆಗೆ ಸುರಿಯುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಇದನ್ನು ತಡೆಗಟ್ಟುವಂತೆ ಕೋಡಿಕಣ್ಣೂರು ನಿವಾಸಿ ನಾರಾಯಣಸ್ವಾಮಿ ಕೋರಿದರು.

ಡಿವೈಎಸ್ಪಿ ಉಮೇಶ್ ಕುಮಾರ್, ಸರ್ಕಲ್ ಇನ್ಸ್​ಪೆಕ್ಟರ್ ಜಗದೀಶ್, ನಗರ ಠಾಣೆ ವೃತ್ತ ನಿರೀಕ್ಷಕ ಫಾರುಕ್, ಪಿಎಸ್​ಐಗಳಾದ ಶಿವರಾಜ್, ಅಣ್ಣಯ್ಯ ಹಾಜರಿದ್ದರು…..