ತುಮಕೂರು:
ನೈಜ ಕಟ್ಟಡ ಕಾರ್ವಿುಕರಲ್ಲದವರನ್ನು ನರೇಗಾ ಯೋಜನೆಯಡಿ ನೇಮಿಸುವುದನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ವಿುಕರ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಸರ್ಕಾರೇತರ ಸಂಸ್ಥೆಯೊಂದು ಸಾವಿರಾರು ಕೋಟಿ ಅನುದಾನ ಖರ್ಚು ಮಾಡಲು ನೈಜ ಕಟ್ಟಡ ಕಾರ್ವಿುಕರಲ್ಲದವರನ್ನು ಕಟ್ಟಡ ಕಾರ್ವಿುಕರೆಂದು ನೋಂದಾಯಿಸಲು ಹೊರಟಿದೆ ಎಂದು ದೂರಿದರು.
ಹತ್ತಾರು ವರ್ಷದಿಂದ ಸಿಮೆಂಟ್, ಮರಳು, ಮಣ್ಣಿನ ಧೂಳು ಕುಡಿದು, ಕಟ್ಟಡ ಕಟ್ಟಿದ ಕಾರ್ವಿುಕರಿಗೆ ಸವಲತ್ತುಗಳಿಲ್ಲ. ನೈಜ ಕಟ್ಟಡ ಕಾರ್ವಿುಕರಲ್ಲದವರಿಗೆ ಸದಸ್ಯತ್ವ ನೀಡಿ, ಹಣ ಲಪಟಾಯಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ಪ್ರತಿಭಟನೆ ನಡೆಸಿ ಡಿಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಎನ್.ಶಿವಣ್ಣ, ಜಿಲ್ಲಾ ಖಜಾಂಚಿ ಅಶ್ವಥನಾರಾಯಣ, ಉಪಾಧ್ಯಕ್ಷ ಹನುಮಂತರಾವ್, ರಾಜ್ಯ ಸಮಿತಿ ಸದಸ್ಯರಾದ ನಾಗರತ್ನಮ್ಮ, ದೇವರಾಜ,ಸಂಘಟನಾ ಕಾರ್ಯದರ್ಶಿ ಗೌಡರಂಗಪ್ಪ, ಶಶಿಕಾಂತ್, ಜಿಲ್ಲಾ ಮುಖಂಡ ಸತ್ಯನಾರಾಯಣ, ನಾಗಣ್ಣ, ಭೂತರಾಜು, ದೊಡ್ಡತಿಮ್ಮಯ್ಯ ಮತ್ತಿತರರು ಇದ್ದರು……