ಮೊಳಕಾಲ್ಮೂರು:
ತಾಲೂಕಿನ ಯರ‌್ರೇನಹಳ್ಳಿ ಸಮೀಪ ಎಂಟು ಎಕರೆ ವಿಸ್ತೀರ್ಣದಲ್ಲಿ ವಸತಿ ಶಾಲೆ ನಿರ್ಮಾಣವಾಗುತ್ತಿದ್ದು, ಹಿಂದುಳಿದ ಪ್ರದೇಶ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಎಚ್.ಆಂಜನೇಯ ಅವರ ಕಾಲದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಮಂಜೂರಾಗಿದ್ದು, ಯರ‌್ರೇನಹಳ್ಳಿ ಬಳಿ ಕರ್ನಾಟಕ ವಸತಿ ಶಿಕ್ಷಣ ಯೋಜನೆಯಡಿ 16.70 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ.
ವಸತಿ ಗೃಹಗಳು, ತರಗತಿ ಕೊಠಡಿ,ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಜಿಮ್ಮು ಮತ್ತು ಕಂಪ್ಯೂಟರ್ ಕೊಠಡಿ ಸೇರಿದಂತೆ ವಿವಿಧ ಕಟ್ಟಡಗಳ ನಿರ್ಮಾಣವಾಗಿದ್ದು, ಈಗಾಗಲೆ ಶೇ.70ರಷ್ಟು ಕೆಲಸ ಮುಗಿದಿದೆ. ಬೆಂಗಳೂರಿನ ಕ್ರೈಸ್ ಸಂಸ್ಥೆಯವರು ಗುತ್ತಿಗೆ ಪಡೆದಿದ್ದು, 2019ರ ಜುಲೈ ಅಂತ್ಯಕ್ಕೆ ಶಾಲೆ ಪ್ರಾರಂಭಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಕಿತ್ತೂರು ರಾಣಿ ಚನ್ನಮ್ಮ ಶಾಲೆ 2007-8ನೇ ಸಾಲಿನಲ್ಲಿ ಮಂಜೂರಾಗಿ ಮೊಳಕಾಲ್ಮೂರಿನಲ್ಲಿ ಕೆಲ ವರ್ಷಗಳ ಕಾಲ ಬಾಡಿಗೆ ಕಟ್ಟಡದಲ್ಲಿ ನಡೆಸಲಾಯಿತು. 2011-12ನೇ ಸಾಲಿನಲ್ಲಿ ಇಲ್ಲಿನ ಮುರಾರ್ಜಿ ವಸತಿಯುತ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿತ್ತು.
ಸರ್ಕಾರಿ ವಸತಿಯುತ ಶಿಕ್ಷಣ ಕೇಂದ್ರಗಳು ಈ ಭಾಗದ ಬಡ ಜನರ ಮಕ್ಕಳ ಪಾಲಿಗೆ ಅವಶ್ಯವಾಗಿವೆ. ಮುರಾರ್ಜಿ ಶಾಲೆಯ 240 ವಿದ್ಯಾರ್ಥಿಗಳ ಜತೆಗೆ 6ರಿಂದ 9ನೇ ತರಗತಿಯ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸೌಲಭ್ಯ ನೀಡಲಾಗುತ್ತಿದೆ. ನೂತನ ಕಟ್ಟಡ ಪೂರ್ಣವಾದ ನಂತರ ಸ್ಥಳಾಂತರ ಮಾಡಲಾಗುವುದು ಎಂದು ಪ್ರಾಂಶುಪಾಲ ಕೆ.ನಾಗರಾಜ್ ತಿಳಿಸಿದರು….