Breaking News

ಸಾಮರಸ್ಯದಿಂದ ಕೂಡಿರುವ ಪ್ರಕೃತಿಯ ಸ್ವರ್ಗ ಮುನ್ನಾರ್..!

SHARE......LIKE......COMMENT......

ಟ್ರಾವೆಲ್:

ಮುನ್ನಾರ್ ಈ ಗಿರಿಧಾಮವು ಪಶ್ಚಿಮ ಘಟ್ಟದ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಇದು ಬೀಸಿ ಬರುವ ಗಾಳಿಗೆ ತೆರೆದುಕೊಂಡಿರುವ ಭೂಭಾಗದಿಂದ ಸುತ್ತುವರೆದಿದೆ. “ಮುನ್ನಾರ್” ಎಂದರೆ “ಮೂರು ನದಿಗಳು” ಎಂದರ್ಥ. ಈ ಪ್ರಾಂತ್ಯವು ಮಧುರಪುಳ, ನಲ್ಲತಣ್ಣಿ ಮತ್ತು ಕುಂಡಲಿ ಎಂಬ ಮೂರು ನದಿಗಳು ಹರಿಯುವ ವಿಶಿಷ್ಟವಾದ ಪ್ರದೇಶವಾಗಿದೆ.ತಮಿಳುನಾಡು ಗಡಿಯಲ್ಲಿರುವ ಮುನ್ನಾರ್ ಪಟ್ಟಣವು ಈ ನೆರೆಯ ರಾಜ್ಯದೊಂದಿಗೆ ಹಲವಾರು ಸಾಂಸ್ಕೃತಿಕ ಕೊಂಡಿಗಳನ್ನು ಉಳಿಸಿಕೊಂಡಿದೆ.

ಪರ್ವತಭಾಗಗಳನ್ನು ಹೊಂದಿ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಮುನ್ನಾರ್ ಕೇರಳ ರಾಜ್ಯಕ್ಕೆ  ವಿಶ್ವದೆಲ್ಲೆಡೆಯಿಂದ  ಮನ್ನಣೆ ದೊರೆಯಲು ಬಹುಪಾಲು ಕೊಡುಗೆಯನ್ನು ನೀಡಿದೆ. ದೇಶ – ವಿದೇಶಗಳಿಂದ ಈ ಸ್ಥಳಕ್ಕೆ ಪ್ರವಾಸಿಗರು ಮತ್ತು ಕುಟುಂಬಸ್ಥರು ತಮ್ಮ ಕುಟುಂಬದ ಸದಸ್ಯರುಗಳ ಜೊತೆಗೆ ಕಾಲ ಕಳೆಯಲು ಆಗಮಿಸುತ್ತಿರುತ್ತಾರೆ. ಸಮಗ್ರ, ಹಿತವಾದ ಮತ್ತು ಆಹ್ಲಾದಕರವಾದ.. ಮುನ್ನಾರ್ ವಸಾಹತು ಮತ್ತು ಆಧುನಿಕ ಇತಿಹಾಸಗಳೆರಡನ್ನು ತನ್ನೊಳಗೆ ಅಡಗಿಸಿಕೊಂಡಿದೆ.

ಭಾರತಕ್ಕೆ ಬಂದ ಬ್ರಿಟೀಷರು ಇಲ್ಲಿನ ಸೌಂದರ್ಯ ಮತ್ತು ಹಿತವಾದ ಹವಾಗುಣಕ್ಕೆ ಮರುಳಾದರು. ಅವರು ಈ ಸ್ಥಳದ ಮೇಲೆ ವಿಪರೀತವಾದ ಅಭಿಮಾನವನ್ನು ಬೆಳೆಸಿಕೊಂಡಿದ್ದರು. ಅಷ್ಟೇ ಅಲ್ಲದೆ ಮುಂದೆ ಈ ಸ್ಥಳವು ದಕ್ಷಿಣ ಭಾರತದಲ್ಲಿ ಬ್ರಿಟೀಷರ ಬೇಸಿಗೆಕಾಲದ ಆಡಳಿತ ಕೇಂದ್ರವಾಗಿ ರೂಪುಗೊಂಡಿತು. ಈಗಲು ಈ ಸ್ಥಳವು ಬೇಸಿಗೆಯಲ್ಲಿ ತನ್ನ ಸುಂದರವಾದ ಸ್ಥಳಗಳಿಂದ ಹಾಗು ಸ್ಫೂರ್ತಿದಾಯಕವಾದ ಹೊರಾಂಗಣಗಳಿಂದಾಗಿ ಇಂದಿಗು ಒಂದು ಉತ್ತಮ ಪ್ರವಾಸಿ ತಾಣವಾಗಿ ಸೇವೆ ಸಲ್ಲಿಸುತ್ತಿದೆ.

ಮುನ್ನಾರ್ ವಿರಾಮ ಕಾಲ ಕಳೆಯುವ ಸ್ಥಳ ಎಂಬುದರ ಜೊತೆಗೆ ಪರಿಸರ ಪ್ರೇಮಿಗಳಿಗೆ ಬೇಕಾಗುವ ಎಲ್ಲಾ ಅಂಶಗಳನ್ನು ತನ್ನೊಳಗೆ ಒಳಗೊಂಡಿದೆ, ಮೇರೆ ಇಲ್ಲದ ಟೀ ತೋಟಗಳು, ಪ್ರಶಾಂತವಾದ ಕಣಿವೆಗಳು, ಏರಿ ಇಳಿದು ಸಾಗಿರುವ ಬೆಟ್ಟಗಳ ಸಾಲು, ಹಿತಕರವಾದ ಭೂಭಾಗಗಳು, ಹಸಿರಿನಿಂದ ಕೂಡಿದ ವನಸಿರಿ, ವಿಪುಲವಾಗಿ ಹರಡಿಕೊಂಡಿರುವ ಪ್ರಾಣಿ ಮತ್ತು ಸಸ್ಯ ಸಂಪತ್ತು, ದಟ್ಟವಾದ ಅರಣ್ಯಗಳು, ವನ್ಯಜೀವಿಧಾಮಗಳು, ಪರಿಮಳಯುಕ್ತವಾದ ಗಾಳಿ, ಎಲ್ಲರನ್ನು ಕೈಬೀಸಿ ಕರೆಯುವ ಹವಾಮಾನ ಮತ್ತು ಇತ್ಯಾದಿಗಳೆಲ್ಲವು ಸೇರಿ ಮುನ್ನಾರನ್ನು ಒಂದು ಅದ್ಭುತವಾದ ಪ್ರವಾಸಿ ತಾಣವನ್ನಾಗಿ ಮಾಡಿವೆ. ಅತ್ಯುತ್ತಮವಾದ ಪ್ರವಾಸಿ ತಾಣಗಳು.

ಮುನ್ನಾರ್ ರಜಾದಿನಗಳನ್ನು ಕಳೆಯಲು ಬಯಸುವವರಿಗೆ ಹಲವಾರು ಆಯ್ಕೆಗಳನ್ನು ನೀಡುತ್ತದೆ. ಇಲ್ಲಿನ ಹವಾಗುಣದಿಂದಾಗಿ ಪ್ರವಾಸಿ ತಾಣಗಳ ವೀಕ್ಷಣೆ ಅತ್ಯಂತ ಆಹ್ಲಾದಕರವಾಗಿರುತ್ತದೆ. ಅಲ್ಲದೆ ಈ ಸ್ಥಳವು ಚಾರಣಿಗರಿಗೆ ಮತ್ತು ಬೈಕ್ ಸವಾರರಿಗೆ ಸ್ವರ್ಗ ಸಮಾನವಾಗಿದೆ. ಇಲ್ಲಿರುವ ಹಲವಾರು ಕಡಿದಾದ ಬೆಟ್ಟಗಳು ಮತ್ತು ರಸ್ತೆಗಳು ಇಂತಹವರುಗಳಿಗಾಗಿ ಅದ್ಭುತವಾದ ಅವಕಾಶಗಳನ್ನು ಒದಗಿಸುತ್ತವೆ.

ಪ್ರವಾಸಿಗರು ಇಲ್ಲಿನ ಟೀ ತೋಟಗಳ ನಡುವೆ ಹಾಗು ಹುಲ್ಲುಗಾವಲುಗಳಲ್ಲಿ ಸಾಗುವ ದಾರಿಗಳಲ್ಲಿ ಸುಮ್ಮನೆ ಒಂದು ದೀರ್ಘವಾದ ನಡಿಗೆಯನ್ನು ಕೈಗೊಳ್ಳಬಹುದು. ಇಲ್ಲಿ ಯಥೇಚ್ಛವಾಗಿ ಪಕ್ಷಿಗಳು ಕಂಡು ಬರುತ್ತವೆ ಹಾಗಾಗಿ ಪಕ್ಷಿ ವೀಕ್ಷಣೆಯು ಈ ಪ್ರಾಂತ್ಯದಲ್ಲಿ ಅತ್ಯಂತ ಜನಪ್ರಿಯ ಚಟುವಟಿಕೆಯಾಗಿದೆ. ಮುನ್ನಾರ್ ತನ್ನಲ್ಲಿರುವ ಅಸಂಖ್ಯಾತ ಸಂಖ್ಯೆಯಲ್ಲಿರುವ ಮನೋರಂಜನ ತಾಣಗಳಿಗೆ ಹೆಸರಾಗಿದೆ. ಇದು ಕುತೂಹಲ ತಣಿಸಿಕೊಳ್ಳಲು ಆಗಮಿಸುವ ಮಕ್ಕಳು, ಮಧುಚಂದ್ರವನ್ನು ಕಳೆಯಲು ಬರುವ ದಂಪತಿಗಳು, ಉತ್ಸಾಹಿ ತರುಣರಿಗೆ, ಸಾಹಸಿ ಬೈಕ್ ಸವಾರರು ಮತ್ತು ಏಕಾಂಗಿ ಪ್ರವಾಸಿಗರು ಹೀಗೆ ಎಲ್ಲ ತರದ ಪ್ರವಾಸಿಗರನ್ನು – ಕುಟುಂಬ ಸದಸ್ಯರನ್ನು ರಜಾ ದಿನಗಳನ್ನು ಕಳೆಯಲು ತನ್ನತ್ತ ಆಕರ್ಷಿಸುತ್ತಿರುತ್ತದೆ. ಚಾರಣಿಗರಿಗೆ, ಬೈಕ್ ಸವಾರರಿಗೆ ಮತ್ತು ವಿಹಾರಿಗಳೆಲ್ಲರಿಗು ಏಕಮೇವ ಸ್ಥಳ! ಎರವಿಕುಲಂ ರಾಷ್ಟ್ರೀಯ ಉದ್ಯಾನವನವು ಮುನ್ನಾರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಇದು ಅಳಿವಿನಂಚಿನಲ್ಲಿರುವ ನೀಲಗಿರಿ ತಹರ್ ಗಳ ತವರಾಗಿದೆ. ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರವಾದ  ಅನಮುಡಿ ಶಿಖರವು ಈ ರಾಷ್ಟ್ರೀಯ ಉದ್ಯಾನವನದಲ್ಲಿ ನೆಲೆಗೊಂಡಿದೆ. ಅರಣ್ಯ ಇಲಾಖೆಯಿಂದ ಅನುಮತಿ ಪಡೆದು 2700 ಮೀಟರ್ ಎತ್ತರವಿರುವ ಈ ಶಿಖರವನ್ನು ಏರಬಹುದು. ಮಟ್ಟುಪೆಟ್ಟಿ ಎಂಬ ಸ್ಥಳವು ಮುನ್ನಾರಿನಿಂದ 13 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಇಲ್ಲಿರುವ ಜಲಾಶಯ, ಕೆರೆ ಮತ್ತು ಭಾರತ ಮತ್ತು ಸ್ವಿಟ್ಜರ್ಲೆಂಡ್ ದೇಶಗಳ ಜಂಟಿ ಹೈನುಗಾರಿಕಾ ಯೋಜನೆಯಡಿಯಲ್ಲಿ ನಡೆಯುತ್ತಿರುವ ಒಂದು ಡೈರಿ ಫಾರಂನ್ನು ನೋಡಬಹುದಾಗಿದೆ.

ಮುನ್ನಾರಿಗೆ ಕೇರಳ ಮತ್ತು ತಮಿಳುನಾಡು ಎರಡು ರಾಜ್ಯಗಳಿಂದಲು ಸುಲಭವಾಗಿ ತಲುಪಬಹುದು. ಪ್ರವಾಸಿಗರು ಇಲ್ಲಿ ಹೋಟೆಲ್, ರೆಸಾರ್ಟುಗಳು, ಹೋಮ್- ಸ್ಟೇ ಮತ್ತು ವಿಶ್ರಾಂತಿ ಗೃಹಗಳಲ್ಲಿ ತಮಗೆ ಬೇಕಾದ ವಾಸ್ತವ್ಯ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಬಹುದು…….