ವಾಸ್ತು ಟಿಪ್ಸ್:
ಯಾವಾಗಲೂ ಮನೆಯಲ್ಲಿ ಗಣೇಶ, ಲಕ್ಷ್ಮೀ ಹಾಗೂ ಸರಸ್ವತಿಯರ ಫೋಟೋ ಒಂದು ಇರಲೇಬೇಕು. ಮುಖ್ಯವಾಗಿ ಪೂರೈಸಬೇಕಾದ ಕೆಲಸಗಳಿಗೆ ವಿಘ್ನಗಳು ಎದುರಾಗದಂತೆ ಗಣೇಶನ ಕೃಪೆ ಆವಶ್ಯಕವಾಗಿದೆ.
ಹಾಗೆಯೇ ನಿರ್ವಿಘ್ನದಾಯಕವಾಗಿ ನಡೆಸುವ ಕೆಲಸಗಳಿಂದ ನಿರ್ವಿಘ್ನದಾಯಕವಾದ ನಿರಂತರವಾದ ಅರ್ಥ ವ್ಯವಸ್ಥೆ ಒಂದು ಸಂಪನ್ನತೆಗೆ ಸಾಗಬೇಕು. ಇದಕ್ಕೆ ಲಕ್ಷ್ಮೀ ಕಟಾಕ್ಷ ಬೇಕು. ಅದಕ್ಕಾಗಿ ಶ್ರೀ ಲಕ್ಷ್ಮೀ ಮನೆಯಲ್ಲಿ ಸ್ಥಿರಗೊಂಡಿರಬೇಕು. ಸ್ಥಿರಗೊಳ್ಳುವ ಆರ್ಥಿಕತೆ ಕೇವಲ ನಿರ್ವಿಘ್ನತೆಗಳು ಹಾಗೂ ಲಕ್ಷ್ಮೀ ಕಟಾಕ್ಷದಿಂದ ಒದಗಲಾರದು. ಒದಗಿದ ಆರ್ಥಿಕ ಸೌಲಭ್ಯ ಗಟ್ಟಿಯಾಗಿ ನೆಲೆಯೂರಲು ಉತ್ತಮ ಜ್ಞಾನ, ಚಾಣಾಕ್ಷತೆ ಪ್ರಬುದ್ಧತೆ ವ್ಯಾವಹಾರಿಕತೆಗಳ ಆವಶ್ಯಕತೆ ಇದ್ದೇ ಇದೆ. ಇಲ್ಲದಿದ್ದಲ್ಲಿ ಚಂಚಲೆಯಾದ ಲಕ್ಷ್ಮೀಯನ್ನು ದೋಚಿಕೊಂಡು ಹೋಗುವ ದುಷ್ಟರಿದ್ದಾರೆ. ಪ್ರಾಣಕ್ಕೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಜ್ಞಾನವನ್ನು ಹೊಂದಬೇಕಾದರೆ ಸರಸ್ವತಿಯ ಕೃಪೆ ತುಂಬಾ ಆವಶ್ಯಕವಾಗಿದೆ. ಗಣೇಶನ ಆರಾಧನೆಯಿಂದಾಗಿ ಈತನ ತಂದೆ ತಾಯಿಯರಾದ ಶಿವ ಪಾರ್ವತಿಯರು ಪ್ರಸನ್ನಗೊಳ್ಳುತ್ತಾರೆ.
ಶ್ರೀ ಲಕ್ಷ್ಮೀಯ ಪ್ರಸನ್ನತೆ ಇದ್ದಲ್ಲಿ ವಿಷ್ಣುವಿನ ಆಶೀರ್ವಾದ ಕಟ್ಟಿಟ್ಟ ಬುತ್ತಿ. ಸರಸ್ವತಿಯೇ ಪ್ರಜಾಪಿತನಾದ ಬ್ರಹ್ಮನ ಪತ್ನಿಯಾಗಿರುವುದರಿಂದ ಶ್ರೀವಾಣಿಯ ಕೃಪೆಯಿಂದಾಗಿ ಬ್ರಹ್ಮನ ಅನುಗ್ರಹ ಕೂಡ ಪ್ರಾಪ್ತಿಯಾಗುತ್ತದೆ. ಅನುಮಾನವೇ ಇಲ್ಲ. ಅಂತೂ ಗಣೇಶ ಲಕ್ಷ್ಮೀ ಸರಸ್ವತಿಯರಿಂದಾಗಿ ನಿರ್ವಿಘ್ನತೆ ಸಂಪತ್ತು ಹಾಗೂ ಜ್ಞಾನದಕೊಡಗಳು ತುಂಬಿರುತ್ತವೆ
ಬದುಕು ಹಸನಾಗಿರುತ್ತದೆ. ಸೃಷ್ಟಿ ಸ್ಥಿತಿ ಹಾಗೂ ಲಯಗಳಿಗೆ ಅಧಿಪತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರ ಕೃಪಾಶೀರ್ವಾದಗಳು ಕೂಡ ನಿಸ್ಸಂಶಯ ಆಸ್ತಿ. ಇದರಿಂದಾಗಿ ಮೂವತ್ಮೂರು ಕೋಟಿ ದೇವತೆಗಳ ರಕ್ಷಣಾತ್ಮಕ ನಿಲುವು ಅಷ್ಟ ದಿಗ್ಗಜಗಳು ಅಷ್ಟಾಂಗಗಳು, ಅಷ್ಟ ಸಿದ್ಧಿಗಳು ಅಷ್ಟ ಶೋಭೆಗಳು, ಅಷ್ಟ ಭೋಗಗಳು ಅಷ್ಟ ಮಂಗಲಾವೃತ ಸುಸ್ಥಿತಿಗಳು, ಅಷ್ಟ ದಿಕ್ಕುಗಳಿಂದ ಉತ್ತಮ ಫಲಗಳು, ಅಷ್ಟ ಐಶ್ವರ್ಯಗಳು, ಪ್ರಸನ್ನತೆ ತೇದಿಯೊಂದಿಗೆ ಒದಗಿಬರುತ್ತದೆ. ಇವನ್ನೆಲ್ಲ ಮುಖ್ಯವಾಗಿ ಗಮನಿಸಬೇಕು.
ಒಟ್ಟಿನಲ್ಲಿ ಮೂಲಭೂತವಾದ ಪ್ರತಿ ಆಂಶಗಳು ಗಣೇಶ ಲಕ್ಷ್ಮೀ ಹಾಗೂ ಸರಸ್ವತಿಯರಿಂದಲೇ ಲಭ್ಯ. ನಮ್ಮ ಸಂಸ್ಕೃತಿಯು ನಿಯೋಜಿಸಿದ ಷೋಡಶ ಸಂಸ್ಕಾರಗಳು ಮೂಲಭೂತವಾಗಿ ನಿರ್ವಿಘ್ನತೆಯಿಂದ ಜ್ಞಾನಾರ್ಜನೆಯೊಡನೆ ಸಂಪತ್ತನ್ನು ಗಳಿಸಿ ಜೀವನ ಧರ್ಮವನ್ನು ರೂಪಿಸಿಕೊಂಡು ಹೋಗಲೆಂದೇ ಮುಖ್ಯವಾದ ಮಾನವೀಯತೆಯನ್ನು ಚಿನ್ನದಂತೆ ಪುಟಗೊಳಿಸುತ್ತದೆ. ದುರ್ಬುದ್ಧಿಗಳಿಂದ ರಕ್ಷಿಸುತ್ತದೆ. ಈ ಎಲ್ಲಾ ವಿಷಯಗಳನ್ನೂ ಗ್ರಹಿಸಿದಾಗ ಮನೆಯಲ್ಲಿ ಸಕಲ ಕಾರ್ಯ ಸಿದ್ಧಿಗೆ ಗಣೇಶ ಲಕ್ಷ್ಮೀ ಹಾಗೂ ಸರಸ್ವತಿಗಳ ದಿವ್ಯ ಉಪಸ್ಥಿತಿ ಸದಾ ಆತ್ಮ ಪರಿಶುದ್ಧತೆಗಳೊಡನೆ ವಸ್ತು ಸ್ಥಿತಿಯಾಗಿರಲಿ…….