ಮೊಳಕಾಲ್ಮೂರು:
ಶಾಸಕ ಬಿ. ಶ್ರೀರಾಮುಲು ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಮೊಳಕಾಲ್ಮೂರು ಆಯೋಜಿಸಿದ್ದ ಸಾಮೂಹಿಕ ಕಲ್ಯಾಣೋತ್ಸವ ಜನಜಾತ್ರೆಯಂತೆ ಕಂಡು ಬಂತು.
ಪಟ್ಟಣದ ಹೊರವಲಯದ ಪೆಟ್ರೋಲ್ ಬಂಕ್ ಬಳಿ ನಿರ್ಮಿಸಿದ್ದ ಬೃಹತ್ ಪೆಂಡಾಲ್ನಲ್ಲಿ ವಧು-ವರರ ಬಂಧುಗಳು, ಸಾರ್ವಜನಿಕರು ಕಿಕ್ಕಿರಿದು ನೆರೆದಿದ್ದರು. ಪಟ್ಟಣದಲ್ಲಿ ರಸ್ತೆಗಳು ಜನರಿಂದ ತುಂಬಿ ಹೋಗಿದ್ದವು.ದಾಂಪತ್ಯಕ್ಕೆ ಅಡಿಯಿಟ್ಟ 73 ಜೋಡಿಗಳನ್ನು ವಿವಿಧ ಮಠಾಧೀಶರು, ಗಣ್ಯರು ಆಶೀರ್ವದಿಸಿ ಶುಭ ಹಾರೈಸಿದರು.
ಮುರುಘಾ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದ ಮಾತನಾಡಿ, ಧಾರ್ಮಿಕ, ರಾಜಕೀಯ, ಕಲೆ, ಸಾಹಿತ್ಯ, ವೈಜ್ಞಾನಿಕ ತಂತ್ರಜಾನ ಕ್ಷೇತ್ರದಲ್ಲಿ ಮಾನವ ತಾನು ಬಯಸಿದ ಸುಖ ಅನುಭವಿಸುತ್ತಿದ್ದಾನೆ. ಶ್ರೀರಾಮುಲು ಅವರಂತಹ ಸಮಾಜಮುಖಿ ಚಿಂತನೆಯುಳ್ಳವರು ಬಡವರ ನೋವು ಅರಿತು ಸಾಮೂಹಿಕ ಕಲ್ಯಾಣದಂತಹ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇದು ಸಾಧಾರಣ ಸಂಗತಿಯಲ್ಲ. ದೇವರ ಸೇವೆಗೆ ಸಮಾನ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೆ ನಾಡ ಹಬ್ಬದಂತೆ ಒಂದೇ ದಿನ ರಾಜ್ಯದ 224ಲು ಕ್ಷೇತ್ರಗಳಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ನಡೆಸುವ ಬಯಕೆ ಹೊಂದಿದ್ದೆವು ಎಂದು ಶಾಸಕ ಬಿ. ಶ್ರೀರಾಮು ಹೇಳಿದರು.
ಸಾಮೂಹಿಕ ವಿವಾಹಕ್ಕೆಂದೇ ಒಬ್ಬ ಮಂತ್ರಿಯನ್ನು ನೇಮಿಸುತ್ತಿದ್ದೆವು. ನಾನು ಮತ್ತು ಗೆಳೆಯ ಜನಾರ್ದನರೆಡ್ಡಿ ಜನರ ಸೇವೆಯ ಈ ರಥವನ್ನು ರಾಜ್ಯದ ಉದ್ದಗಲಕ್ಕೂ ಕೊಂಡೊಯ್ಯುವ ಇಚ್ಚೆ ಹೊಂದಿದ್ದೇವೆ. ಇಂದಲ್ಲ ನಾಳೆ ದೇವರ ದಯೆಯಿಂದ ಅದು ಈಡೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು……