ಮುದ್ದೇಬಿಹಾಳ:
ವಿಜಯಪುರ ಜಿಲ್ಲಾಧಿಕಾರಿ ಡಾ| ಎಸ್.ಬಿ. ಶೆಟ್ಟೆಣ್ಣವರ ಶುಕ್ರವಾರ ಮುದ್ದೇಬಿಹಾಳ ಪಟ್ಟಣಕ್ಕೆ ದಿಢೀರ್ ಭೇಟಿ ನೀಡಿ ಹಳೆ ನ್ಯಾಯಾಲಯ ಕಟ್ಟಡ, ಪುರಸಭೆ ಸೇರಿದಂತೆ ವಿವಿಧ ಸ್ಥಳಗಳನ್ನು ಪರಿಶೀಲಿಸಿದರು.
ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು, ಕಚೇರಿ ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಿದರು. ನಂತರ ಪುರಸಭೆಯಿಂದ ನಡೆದ ಕಾಮಗಾರಿಗಳ ಬಗ್ಗೆ ಪ್ರಗತಿ ಹಂತದ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೇ ನಿತ್ಯ ಕಾರ್ಯಾಲಯಕ್ಕೆ ಬರುವ ಸಾರ್ವಜನಿಕರ ಮನವಿಗೆ ಸರಿಯಾಗಿ ಸ್ಪಂಧಿಸಬೇಕು ಎಂದು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳು ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ರಾಮೋಡಗಿ ಎನ್ನುವರು ತಮಗೆ ಮನೆ ಉತಾರಿ ಪೂರೈಸಬೇಕು ಎಂದು ಕಳೆದ 3 ತಿಂಗಳ ಹಿಂದೆಯೆ ಅರ್ಜಿ ನೀಡಿದ್ದು ಇಲ್ಲಿವರೆಗೂ ನಮಗೆ ಉತಾರಿ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಮುಖಾಮುಖೀಯಾಗಿ ದೂರು ಹೇಳಿದ ಹಿನ್ನೆಲೆ ಅಧಿಕಾರಿಗಳ ಮೇಲೆ ಗರಂ ಆದ ಡಿಸಿ, ಮುಖ್ಯಾಧಿಕಾರಿ ಶೇಖರಪ್ಪ ಈಳಗೇರ ಅವರಿಗೆ ಉತಾರಿ ವಿಳಂಬದ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಸ್ವತಃ ತಾವೇ ಕುಂದು ಕೊರತೆ ವಿಭಾಗಕ್ಕೆ ತೆರಳಿ ಕಂಪ್ಯೂಟರ್ನಲ್ಲಿ ದಾಖಲಾತಿ ದೂರನ್ನು ತೆಗೆದು ನೋಡಿದರು.
ರಾಮೋಡಗಿ ಅವರ ಅರ್ಜಿ ವಿಲೇವಾಗಿ ಆಗದಿರುವುದು ಕಂಡುಬಂದ ಹಿನ್ನೆಲೆ ಪುರಸಭೆಯಲ್ಲಿರುವ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಐಟಿ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೂಡಲೇ ಇವರನ್ನು ತೆಗೆದು ಹಾಕಬೇಕು ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು. ಪುರಸಭೆ ಕಚೇರಿ ಕಾರ್ಯ ನಿರ್ವಹಣೆ ಬಗ್ಗೆ ಅತೃಪ್ತಿ ಹೊರಹಾಕಿದ ಅವರು ಸುಧಾರಿಸಿಕೊಳ್ಳುವಂತೆ ಮುಖ್ಯಾಧಿಕಾರಿ ಮತ್ತು ಇತರೆ ಕಚೇರಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.