Breaking News

ಹಳೇ ನೋಟು ವ್ಯವಹಾರ, 12 ಆರೋಪಿಗಳು ಅಂದರ್..!

ಎಸ್ಪಿ ಕಚೇರಿ ಸಿಬ್ಬಂದಿ ಕೂಡ ಶಾಮೀಲು....

SHARE......LIKE......COMMENT......

ಬಾಗಲಕೋಟೆ:

ಹಳೆಯ ನೋಟು ಬದಲಾಯಿಸುವ ಅಂತಾರಾಜ್ಯ ವಂಚಕರ ತಂಡದೊಂದಿಗೆ ಶಾಮೀಲಾದ ಆರೋಪದ ಮೇಲೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯ ಮಿನಿ ಸ್ಟರಿಯಲ್‌ ಸಿಬ್ಬಂದಿ ಅಶೋಕ ನಾಯಕ ಅವರನ್ನು ಎಸ್‌ಪಿ ಸಿ.ಬಿ.ರಿಷ್ಯಂತ ಸೋಮವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಶೋಕ ನಾಯಕ ಹಣ ದ್ವಿಗುಣ ಹಾಗೂ ಹಳೆಯ ನೋಟು ಬದಲಿಸಿಕೊಡುವ ಅಂತಾರಾಜ್ಯ ವಂಚಕರೊಂದಿಗೆ ವ್ಯವಹಾರ ಮಾಡಲು ಮುಂದಾಗಿದ್ದರು. 20 ಸಾವಿರ ಕೊಟ್ಟು ಹಣ ದ್ವಿಗುಣ ಮಾಡಿಕೊಳ್ಳಲು ಹೋಗಿದ್ದರು. ಜವಾಬ್ದಾರಿಯುತ ಇಲಾಖೆಯಲ್ಲಿದ್ದು, ಹಣದಾಸೆಗೆ ವಂಚಕರೊಂದಿಗೆ ಶಾಮೀಲಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಗೋವಾ, ಮಹಾರಾಷ್ಟ್ರ, ಉತ್ತರಪ್ರದೇಶ ಹಾಗೂ ಕರ್ನಾಟಕದ 12 ಜನರ ತಂಡ ಹಣ ದ್ವಿಗುಣ ಹಾಗೂ ಹಳೆಯ ನೋಟು ಬದಲಿಸಿ ಕೊಡುವ 667 ಕೋಟಿ ವ್ಯವಹಾರದ ಪ್ರಕರಣವನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಈ ತಂಡ ತಮ್ಮ ವಾಹನಗಳ ಮೇಲೆ ಪೊಲೀಸ್‌ ಮತ್ತು ಪ್ರೆಸ್‌ ಎಂಬ ಸ್ಟಿಕ್ಕರ್‌ ಅಂಟಿಸಿ ವ್ಯವಹಾರ ಕುದುರಿಸಿಕೊಳ್ಳುತ್ತಿತ್ತು. ಸೋಮವಾರ ಈ ತಂಡದವರು ಬಳಸುತ್ತಿದ್ದ ಮೂರು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿ ಎಸ್‌.ಬಿ. ಗಿರೀಶ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಲಾಗುತ್ತಿದೆ. 12 ಆರೋಪಿಗಳನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ಮುಂದುವರಿದಿದ್ದು, ಮಾಹಿತಿ ಕಲೆ ಹಾಕಲಾಗುತ್ತಿದೆ.

ಪ್ರಕರಣವನ್ನು ಜಿಲ್ಲಾ ಪೊಲೀಸ್‌ ಇಲಾಖೆ ಮೊದಲು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲು ಗೃಹ ಇಲಾಖೆಯಿಂದ ನಿರ್ದೇಶನ ಬಂದಿದೆ ಎನ್ನಲಾಗಿದೆ. ಅಲ್ಲದೇ ಪ್ರಕರಣದ ಕುರಿತು ರಾಜ್ಯ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಪಡೆದುಕೊಂಡಿದೆ. ಹಳೇ ನೋಟು ಬದಲಾಯಿಸಿಕೊಡುವ ಈ ತಂಡದೊಂದಿಗೆ ಆರ್‌ಬಿಐ ನೌಕರ ಸಂಪರ್ಕ ಹೊಂದಿರುವ ಕುರಿತು ವದಂತಿಗಳಿದ್ದು, ಆ ನಿಟ್ಟಿನಲ್ಲಿ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ ಎನ್ನಲಾಗಿದೆ….