ಒಡಿಶಾ:
ತಿತ್ಲಿ ಎಂಬ ಪ್ರಬಲ ಚಂಡಮಾರುತ ಒಡಿಶಾ ರಾಜ್ಯಕ್ಕೆ ಅಪ್ಪಳಿಸಿದ್ದು, ಚಂಡಮಾರುತದಿಂದ ಪಾರಾಗುವ ಸಲುವಾಗಿ ಗುಹೆಯೊಂದರಲ್ಲಿ ಆಶ್ರಯ ಪಡೆದಿದ್ದ 12 ಮಂದಿ ಮೃತಪಟ್ಟು, ನಾಲ್ವರು ನಾಪತ್ತೆಯಾಗಿದ್ದಾರೆಂದು ಶನಿವಾರ ತಿಳಿದುಬಂದಿದೆ.
ಗಜಪತಿ ಜಿಲ್ಲೆಯ ಬಾರ್ಗರಾ ಗ್ರಾಮದ ಮನೆಗಳ ಛಾವಣಿಮಚಂಡಮಾರುತದ ರಭಸಕ್ಕೆ ಹಾರಿಹೋಗಿದ್ದವು. ಆದಾದ ಬಳಿಕ ಅಲ್ಲಿನ 22 ಮಂದಿ ಸ್ಥಳದಲ್ಲಿಯೇ ಇದ್ದ ಗುಹೆಯೊಂದರಲ್ಲಿ ಆಶ್ರಯ ಪಡೆದಿದ್ದರು. ಆದರೆ, ಮಳೆಯ ರಭಸಕ್ಕೆ ಆ ಗುಹೆಯ ಕಲ್ಲು ಜನರ ಮೇಲೆ ಕುಸಿದು ಬಿದ್ದಿದೆ.ಪರಿಣಾಮ ಮೂವರು ಮಕ್ಕಳು ಸೇರಿ 12 ಮಂದಿ ಮೃತಪಟ್ಟಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ. ಇನ್ನುಳಿದ 6 ಮಂದಿ ಸುರಕ್ಷಿತವಾಗಿ ಹಳ್ಳಿಗೆ ಆಗಮಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆಂದು ವರದಿಗಳು ತಿಳಿಸಿವೆ.
ಪದೇ ಪದೇ ಚಂಡಮಾರುತ ಎದುರಿಸುವ ರಾಜ್ಯಗಳಲ್ಲಿ ಒಡಿಶಾ ಯಾವಾಗಲೂ ಮುಂದು. ಸದಾ ಕಾಲ ನೈಸರ್ಗಿಕ ವಿಕೋಪಗಳಿಗೆ ತುತ್ತಾಗಿವ ಅಪಾಯವಿರುವ ಒಡಿಶಾ ರಾಜ್ಯ ಸದಾಕಾಲ ಸಿದ್ಧವಾಗಿರುತ್ತದೆ. ಆದರೂ ತಿತ್ಲಿ ಚಂಡಮಾರುತ ಒಡಿಶಾಗೆ ಭಾರೀ ಹೊಡೆತವನ್ನೇ ನೀಡಿದೆ. ಚಂಡಮಾರುತ ಸುಮಾರು 38.7 ಲಕ್ಷ ಜನರ ಮೇಲೆ ಗಂಭೀರ ಪರಿಣಾಮ ಬೀರಿದೆ. 1000ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.
ಚಂಡಮಾರತುದಿಂದಾಗಿ ಸದಾ ಕಾಲ ತತ್ತರಿಸುತ್ತಲೇ ಇರುವ ಗಂಜಮ್, ಗಜಪತಿ ಹಾಗೂ ರಾಯಗಢ ಜಿಲ್ಲೆಯ ಪರಿಸ್ಥಿತಿಯಂತೂ ಹೇಳತೀರದಾಗಿದೆ.ಚಂಡಮಾರುತದಿಂದಾಗಿ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಗಂಜಮ್, ಗಜಪತಿ ಹಾಗೂ ರಾಯಘಡ ಜಿಲ್ಲೆಗಳ ಪರಿಸ್ಥಿತಿಯನ್ನು ಸ್ವತಃ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸುವ ಮೂಲಕ ಪರಿಶೀಲನೆ ನಡೆಸುತ್ತಿದ್ದಾರೆ.
ಭಾರತ ದೇಶ ಪರ್ಯಾಯ ಪ್ರಸ್ಥಭೂಮಿಯಾಗಿದೆ. ಅಂದರೆ, ದೇಶದ ಮೂರು ಭಾಗಗಳಲ್ಲಿ ನೀರು ಆವರಿಸಿದೆ. ಪೂರ್ವದಲ್ಲಿ ಬಂಗಾಳ ಕೊಲ್ಲಿ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ದಕ್ಷಿಣತುದಿಯಲ್ಲಿ ಹಿಂದೂ ಮಹಾಸಾಗರವಿದೆ. ಆದರೂ ಪೂರ್ವ ಭಾಗದ (ಬಂಗಾಳ ಕೊಲ್ಲಿ) ವ್ಯಾಪ್ತಿಯ ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು ಹೆಚ್ಚು ಚಂಡಮಾರುತದ ಪ್ರಕ್ಷೋಭಗೆ ಒಳಗಾಗುತ್ತವೆ.
ಇದಕ್ಕೆ ಕಾರಣ ಹೆಚ್ಚು ಉಷ್ಣಾಂಶ. ಹೌದು ಒಡಿಶಾ, ಆಂಧ್ರ, ತಮಿಳುನಾಡು ಬಂಗಾಳ ಕೊಲ್ಲಿ ವ್ಯಾಪ್ತಿಯಲ್ಲಿವೆ. ಬಂಗಾಳ ಕೊಲ್ಲಿಯಲ್ಲಿನ ಉಷ್ಣಾಂಶ ಅರಬ್ಬಿ ಸಮುದ್ರಕ್ಕಿಂತ ಹೆಚ್ಚಿರುತ್ತದೆ. ಈ ಉಷ್ಣಾಂಶವು ತೇವಾಂಶ ಉಳಿಸಿಕೊಳ್ಳಲು ಮತ್ತು ಸೈಕ್ಲೋನ್ ಸೃಷ್ಟಿಗೆ ಕಾರಣವಾಗುತ್ತದೆ. ಅಲ್ಲದೆ, ದಕ್ಷಿಣ ಚೀನಾ ಸಮುದ್ರದಲ್ಲಿ ಏಳುವ ಟೈಫೂನ್ ಗಳು ಬಂಗಾಳ ಕೊಲ್ಲಿ ಮೂಲಕ ಹಾದು ಹೋದಾಗಲೂ ಗಾಳಿಯ ತೇವಾಂಶದಲ್ಲಿ ಏರಿಳಿತಗಳಾಗಿ ಸೈಕ್ಲೋನ್ ಸೃಷ್ಟಿಯಾಗುತ್ತವೆ…….