ಸ್ಯಾಂಡಲ್‌ವುಡ್:
“ಸಂಜು”. ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು.ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು. ಹಿರಿಯ ನಿರ್ಮಾಪಕ ಸಾ ರಾ ಗೋವಿಂದು, ಕೆ.ಮಂಜು, ನಿರ್ದೇಶಕ ಎಂ.ಡಿ.ಕೌಶಿಕ್ ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
“ಸಂಜು” ನನ್ನ ನಿರ್ದೇಶನದ ಆರನೇ ಚಿತ್ರ. ಈ ಚಿತ್ರಕ್ಕೆ “ಅಗಮ್ಯ ಪಯಣಿಗ” ಎಂಬ ಅಡಿಬರಹವಿದೆ. ಇದೊಂದು ಬಸ್ ನಿಲ್ದಾಣದಲ್ಲಿ ನಡೆಯುವ ಕಥೆ. ಇಲ್ಲಿ ನಾಯಕ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕಿನಲ್ಲೂ ಸಾಕಷ್ಟು ಏರಿಳಿತಗಳಿರುತ್ತದೆ. ನಾಯಕಿ ಸರಸ್ವತಿ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ಮಡಿಕೇರಿಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ. ಯಾವುದೇ ಕೊರತೆ ಬಾರದಂತೆ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕ ಸಂತೋಷ್ ಅವರಿಗೆ ಹಾಗೂ ನಮ್ಮ ಆಹ್ವಾನವನ್ನು ಮನ್ನಿಸಿ ಬಂದಿರುವ ಎಲ್ಲಾ ಅತಿಥಿಗಳಿಗೆ ಧನ್ಯವಾದ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಯತಿರಾಜ್ ತಿಳಿಸಿದರು.
ಚಿತ್ರದ ನಾಯಕ ಮನ್ವೀತ್ ಮಾತನಾಡಿ, ದಯವಿಟ್ಟು ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ. ಹೊಸ ತಂಡಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ. ನಾನು ಸಾಮಾನ್ಯ ರೈತನ ಮಗ. ನನ್ನ ಮೊದಲ ಚಿತ್ರವನ್ನು ಇಷ್ಟು ಅದ್ದೂರಿಯಾಗಿ ನಿರ್ಮಾಣ ಮಾಡಿರುವ ನಿರ್ಮಾಪಕರಿಗೆ ಹಾಗೂ ಅವಕಾಶ ನೀಡಿದ ನಿರ್ದೇಶಕರಿಗೆ ಧನ್ಯವಾದ ಎಂದರು.
ನಾಯಕಿಯಾಗಿ ನಟಿಸಿರುವ ರೇಖಾದಾಸ್ ಪುತ್ರಿ ಶ್ರಾವ್ಯ ಮಾತನಾಡುತ್ತಾ, ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಸರಸ್ವತಿ. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಅಂದ ಹಾಗೆ ಎಲ್ಲರಲ್ಲೂ ಒಂದು ಮನವಿ. ನಾನು ಶ್ರಾವ್ಯ ಎಂಬ ಹೆಸರನ್ನು ಸಾತ್ವಿಕ ಎಂದು ಬದಲಿಸಿಕೊಂಡಿದ್ದೇನೆ. ಎಲ್ಲರೂ ನನ್ನ ಹೆಸರನ್ನು ಸಾತ್ವಿಕ ಎಂಬ ಹೆಸರಿನಿಂದಲೇ ಎಂದು ಕರೆಯಬೇಕೆಂದು ವಿನಂತಿಸಿದರು.
ಸಂಗೀತ ನಿರ್ದೇಶಕ ವಿಜಯ್ ಹರಿತ್ಸ, ಛಾಯಾಗ್ರಾಹಕ ವಿದ್ಯಾ ನಾಗೇಶ್ ಹಾಗೂ ಚಿತ್ರದಲ್ಲಿ ನಟಿಸಿರುವ ಸುಂದರಶ್ರೀ, ತೇಜಸ್ವಿನಿ, ಬಲ ರಾಜವಾಡಿ, ಮಹಾಂತೇಶ್, ಮುಂತಾದವರು ಚಿತ್ರದ ಕುರಿತು ಮಾತನಾಡಿದರು.