Breaking News

ಹಯಗ್ರೀವನನ್ನ ಒಲಿಸಿಕೊಂಡರೆ ಯಾವ ಫಲಾನುಫಲಗಳು ದೊರೆಯುತ್ತದೆ..?

ಮಹಾವಿಷ್ಣುವನ್ನು ಆರಾಧಿಸುವ ಪೂಜಾ ವಿಧಿವಿಧಾನಗಳೇನು....

SHARE......LIKE......COMMENT......

ವಿಷ್ಣುವಿನ ಹಯಗ್ರೀವ ಅವತಾರದ ಮಹತ್ವವೇನು?

ಭಾರತೀಯ ಪುರಾಣಗಳಲ್ಲಿ ವಿಷ್ಣುವಿನ ಅವತಾರಗಳು ಎಷ್ಟು ಪ್ರಸಿದ್ಧವೋ ಅಷ್ಟೇ ವಿಭಿನ್ನ ವಿಶಿಷ್ಟವೂ ಹೌದು. ಇದಕ್ಕೆ ವಿಶೇಷವಾಗಿ ಮತ್ಸ್ಯ ಕೂರ್ಮ, ವರಾಹ, ವಾಮನ, ನರಸಿಂಹ ಅವತಾರಗಳನ್ನು ಉಲ್ಲೇಖಿಸಬಹುದು. ಅಂಥದ್ದೇ ಇನ್ನೊಂದು ಹಯಗ್ರೀವ ಅವತಾರ. ಶ್ರಾವಣಮಾಸದ ಹುಣ್ಣಿಮೆಯಂದು ಹಯಗ್ರೀವ ಜಯಂತಿಯನ್ನು ಆಚರಿಸಲಾಗುತ್ತದೆ. ವಿಷ್ಣುವಿನ ಹಯಗ್ರೀವ ಅವತಾರಕ್ಕೆ ವಿಶೇಷ ಮಹತ್ವವಿದೆ. ಹೆಸರೇ ಸೂಚಿಸುವಂತೆ ವಿಷ್ಣುವಿನ ಹಯಗ್ರೀವ ಅವತಾರ ಮನುಷ್ಯನ ದೇಹ, ಕುದುರೆಯ ತಲೆ ಹೊಂದಿದೆ. ವೈಷ್ಣವ ಸಂಪ್ರದಾಯದಲ್ಲಂತೂ ಹಯಗ್ರೀವರಿಗೆ ವಿಶೇಷ ಸ್ಥಾನವಿದ್ದು, ಪವಿತ್ರಗ್ರಂಥಗಳ ಅಧ್ಯಯನ ಪ್ರಾರಂಭಕ್ಕೂ ಮುನ್ನ ಹಯಗ್ರೀವನನ್ನು ಪ್ರಾರ್ಥಿಸಲಾಗುತ್ತದೆ.

ಶ್ರಾವಣ ಮಾಸದಲ್ಲಿ ಬರುವ ಪೌರ್ಣಮಿಯಂದು ಹಯಗ್ರೀವ ಜಯಂತಿಯನ್ನು ಆಚರಿಸಲಾಗುತ್ತದೆ. ಇದಲ್ಲದೇ ಮಹಾನವಮಿಯಂದೂ ಹಯಗ್ರೀವವನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ ಸೃಷ್ಠಿಯ ಪ್ರಾರಂಭದಲ್ಲಿ ಮಧು-ಕೈಟಭರೆಂಬ ಇಬ್ಬರು ರಾಕ್ಷಸರು ಬ್ರಹ್ಮನಿಂದ ವೇದಗಳನ್ನು ಕದಿಯುತ್ತಾರೆ. ವೇದಗಳನ್ನು ರಕ್ಷಿಸಲು ವಿಷ್ಣು ಹಯಗ್ರೀವ ಅವತಾರ ಪಡೆಯಬೇಕಾಗುತ್ತದೆ.  ಈ ಕತೆಯನ್ನು ಒಂದು ರೂಪಕವಾಗಿ ಪರಿಗಣಿಸುವುದಾದರೆ ಪರಿಶುದ್ಧ ಜ್ಞಾನ ಎಂಬ ಶ್ರೇಷ್ಠತೆಗೆ, ರಾಕ್ಷಸೀತನದ ಪ್ರತೀಕವಾದ  ಅಜ್ಞಾನವೆಂಬ ಕತ್ತಲೆಯ ವಿರುದ್ಧ  ಜಯ ಎಂಬ ಸಂದೇಶ ಇಲ್ಲಿ ದೊರಕುತ್ತದೆ. ವೇದಗಳನ್ನು ರಕ್ಷಿಸಿದ ಹಿನ್ನೆಲೆಯಲ್ಲಿ ಸ್ಪಟಿಕದಂತೆ ನಿರ್ಮಲ ಸ್ವರೂಪರಾದ ಶ್ರೀಹಯಗ್ರೀವರು ಸಕಲ ವಿದ್ಯೆ ಜ್ಞಾನಗಳ ಆಧಾರವಾಗಿರುವುದರಿಂದ ಹಯಗ್ರೀವನನ್ನು ಜ್ಞಾನದ ದೇವರೆಂದು ಪೂಜಿಸಲಾಗುತ್ತದೆ.

ಹಯಗ್ರೀವ ರೂಪದ ಪೌರಣಿಕ ಹಿನ್ನಲೆ ಏನು?

ಮಧು-ಕೈಟಭರೆಂಬ ರಾಕ್ಷಸರು ಬ್ರಹ್ಮನಿಂದ ವೇದಗಳನ್ನು ಕದ್ದು ರಾಕ್ಷಸ ಪ್ರವೃತ್ತಿಗಳಿನುಗುಣವಾಗಿ ಋಷಿಮುನಿಗಳ ನಾಶ, ಸುರರೊಡನೆ ಕಾದಾಟ ನಡೆಸುತ್ತಾರೆ. ಇಂಥಹ ಪರಿಸ್ಥಿತಿಗಳಲ್ಲಿ ಕಷ್ಟಬಂದಾಗ ಸಂಕಟಹರಣನಾದ ಮಹಾವಿಷ್ಣುವೇ ಗತಿ. ಹೀಗಾಗಿ  ದೇವತೆಗಳ ಪ್ರಾರ್ಥನೆಗೆ ಓಗೊಟ್ಟು ಮಹಾವಿಷ್ಣು ಅಸುರರೊಂದಿಗೆ ಯುದ್ಧ ನಡೆಸುತ್ತಾನೆ. ಸುದೀರ್ಘ ಅವಧಿಯವರೆಗೆ ಅಸುರರೊಂದಿಗೆ ಸೆಣೆಸಿದ  ಶ್ರೀಮನ್ನಾರಾಯಣನಿಗೂ ಬಳಲಿಕೆಗಳು ಮೂಡಿತ್ತು. ಹೀಗಾಗಿ ವೈಕುಂಠಕ್ಕೆ ಹಿಂದಿರುಗಿದ ಮಹಾವಿಷ್ಣುವು ಕೈಯಲ್ಲಿದ್ದ ಧನುಸ್ಸನ್ನೇ ದಿಂಬನ್ನಾಗಿಸಿಕೊಂಡು ಯೋಗ ನಿದ್ರೆಗೊಳಗಾದನು. ದೇವತೆಗಳೆಲ್ಲಾ ಧನುಸ್ಸಿನ ಝೇಂಕಾರ ಮಾಡಿ ವಿಷ್ಣುವನ್ನು ಎಚ್ಚರಗೊಳಿಸಲು ಯತ್ನಿಸಿದರು. ಆ ಕ್ಷಣದಲ್ಲಿ ನಡೆದ ಅಚಾತುರ್ಯದಿಂದ  ಆ ಧನುಸ್ಸಿನ ಕಂಬಿ, ಯೋಗನಿದ್ರೆಯಲ್ಲಿದ್ದ ವಿಷ್ಣುವಿನ ಕತ್ತನ್ನು ಕೊಯ್ದಿತು. ವಿಷ್ಣುವಿನ ಕತ್ತೇ ಇಲ್ಲದಂತಹ ಪರಿಸ್ಥಿತಿ ದೇವತೆಗಳನ್ನು ಕಂಗಾಲಾಗಿಸಿತು. ಇದೀಗ ಸಹಾಯಕ್ಕೆ ಬಂದದ್ದು ಮಹಾಮಾಯೆ ದೇವಿಯಾದ ದುರ್ಗೆ. ದೇವತೆಗಳಿಗೆ ಭರವಸೆಯಿತ್ತ ತಾಯಿ ದುರ್ಗೆಯು,  ಶ್ವೇತ ಹಯದ ಮುಖವೊಂದನ್ನು ವಿಷ್ಣುವಿನ ದೇಹಕ್ಕೆ ತಂದಿಡಲು ಆಣತಿಯಿತ್ತಳು ತದನಂತರ ಯೋಗನಿದ್ರೆಯಿಂದ ಹೊರ ಬಂದ ವಿಷ್ಣು ಅಸುರರನ್ನು ಸಂಹರಿಸಿ, ವೇದಗಳನ್ನು ಸಂರಕ್ಷಿಸಿ  ಹಯಗ್ರೀವ ದೇವನಾದನು.

ವೈಷ್ಣವ ಗುರು ರಾಮಾನುಜಾಚಾರ್ಯರು ಒಮ್ಮೆ ತಮ್ಮ ಬ್ರಹ್ಮಸೂತ್ರ ಭಾಷ್ಯವನ್ನು ಸರಸ್ವತೀದೇವಿಯ ದೇಗುಲದಲ್ಲಿ ದೇವರ ಎದುರು ಮಂಡಿಸಿದರಂತೆ. ಇವರ ಈ ಮಹಾ ಭಾಷ್ಯವನ್ನು ಕೇಳಿ ಸಂಪ್ರೀತಗೊಂಡ ಮಾತೆ ಅದಕ್ಕೆ “ಶ್ರೀಭಾಷ್ಯಂ” ಎಂದು ಹೆಸರಿಸಿ, ಯತಿರಾಜರಿಗೆ ಚತುರ್ಭುಜ ಭೂಷಿತನಾದ, ಶ್ವೇತವಸ್ತ್ರಧಾರಿ, ಶ್ವೇತಾಶ್ವಮುಖಿ, ಬಿಳಿಯ ಕಮಲ ಪುಷ್ಪದಲ್ಲಿ, ಕಾಲಿಗೆ ಗೆಜ್ಜೆಕಟ್ಟಿ, ಎರಡು ಕೈಯಲ್ಲಿ ಶಂಕು, ಚಕ್ರ, ಒಂದು ಕೈಯಲ್ಲಿ ಪುಸ್ತಕ ಮತ್ತೊಂದು ಕೈಯಲ್ಲಿ ಜಪಮಾಲೆ ಧರಿಸಿ, ಪತ್ನಿ ಲಕುಮಿಯೊಡನೆ ಆಸೀನನಾದ ಹಯಗ್ರೀವ ಮೂರ್ತಿಯನ್ನಿತ್ತಳಂತೆ.

ಹಯಗ್ರೀವನನ್ನ ಒಲಿಸಿಕೊಂಡರೆ ಯಾವ ಫಲಾನುಫಲಗಳು ದೊರೆಯುತ್ತದೆ?

ವಿದ್ಯೆಯ ಅಧಿದೈವ ಹಯಗ್ರೀವ
ಜ್ಞಾನಾನಂದ-ಮಯಮ್ ದೇವಮ್ ನಿರ್ಮಲಸ್ಪಟಿಕಾಕೃತಿಮ್ |
ಆಧಾರಮ್ ಸರ್ವವಿದ್ಯಾನಾಮ್ ಹಯಗ್ರೀವಮ್ ಉಪಾಸ್ಮಹೆ ||

ಎಂಬುದು ವಿದ್ಯಾರ್ಜನೆಗೆ ತೊಡಗುವವರ ಎಲ್ಲರಲ್ಲೂ ಅನಾದಿಕಾಲದಿಂದಲೂ ನಡಿಯುತ್ತಿರುವ ಪ್ರಾರ್ಥನೆ. ‘ಸ್ಪಟಿಕದಂತೆ ನಿರ್ಮಲಸ್ವರೂಪರಾದ ಶ್ರೀಹಯಗ್ರೀವರು ಸಕಲ ವಿದ್ಯೆ ಜ್ಞಾನಗಳ ಆಧಾರ. ನಮ್ಮ ಅಜ್ಞಾನಗಳನ್ನು ದೂರಮಾಡಿ ಸುಜ್ಞಾನವನ್ನು ದಯಪಾಲಿಸಿ’ ಎಂದು ಶ್ರೀಲಕ್ಷಿ್ಮೕಹಯಗ್ರೀವರಿಗೆ ನಮಿಸುವ ಪ್ರಾರ್ಥನೆಯಿದು. ಹಯಗ್ರೀವ ಕುದುರೆಯ ಮುಖವುಳ್ಳ ದೇವರು. ದೇಗುಲಗಳಲ್ಲಿ ಈ ಹಯಗ್ರೀವದೇವರ ಜತೆಗೆ ಲಕ್ಷಿ್ಮಯೂ ಕಾಣುವುದರಿಂದ ಇದು ಮಹಾವಿಷ್ಣುವಿನ ಅವತಾರ ಎಂಬುದು ಸುಲಭವಾಗಿ ಅರಿವಿಗೆ ಬರುತ್ತದೆ.

ಜ್ಞಾನ ಹಾಗೂ ಬುದ್ಧಿಯ ಅಧಿದೇವನನ್ನಾಗಿ ಹಯಗ್ರೀವ ದೇವರನ್ನು ಪೂಜಿಸಲಾಗುತ್ತದೆ. ಹೀಗಾಗಿ ಶ್ರೀವೈಷ್ಣವರಲ್ಲಿ ಅಕ್ಷರಾಭ್ಯಾಸದ ಪ್ರಾರಂಭಕ್ಕೂ ಮುನ್ನ ಹಯಗ್ರೀವ ಸನ್ನಿಧಿಗೆ ತೆರಳಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ. ತಮಿಳುನಾಡಿನ ಶ್ರೀರಂಗನ ದೇವಸ್ಥಾನದ ಆವರಣದಲ್ಲಿರುವ ಹಯಗ್ರೀವದೇವರ ಸನ್ನಿಧಿಯಿದೆ. ‘ಹಯಗ್ರೀವರಿಗಿಂತ ಹಿರಿದಾದ ಮಂಗಳವಿಲ್ಲ, ಹಯಗ್ರೀವರಿಗಿಂತ ಪಾಪಗಳಿಂದ ಮುಕ್ತಿ ಹೊಂದುವ ಪಾವನತ್ವ ಮತ್ತೊಂದಿಲ್ಲ, ಹಯಗ್ರೀವರಿಗಿಂತ ಹಿರಿದಾದ ದೈವವಿಲ್ಲ ಹಯಗ್ರೀವರಲ್ಲಿ ಶರಣಾದವರಿಗೆ ದುಃಖವೇ ಇಲ್ಲ’ ಎಂದು ಶ್ರೀ ವಾದಿರಾಜಸ್ವಾಮಿಗಳು ಸ್ತೋತ್ರವೊಂದರಲ್ಲಿ ಹಯಗ್ರೀವ ಮಹಿಮೆಯನ್ನು ವರ್ಣಿಸಿದ್ದಾರೆ. ಹೀಗೆ ವಿವಿಧ ರೂಪಗಳಲ್ಲಿ ಹಯಗ್ರೀವ ಚರಿತ್ರೆ ಜನಮಾನಸದಲ್ಲಿ ಭಕ್ತಿಯ ಹೊಳೆಯನ್ನೇ ಹರಿಸಿದೆ.