ಭಾರತದಲ್ಲಿ ಶಕುನಗಳಿಗೆ ಅತಿ ಹೆಚ್ಚು ಪ್ರಾಶಸ್ತ್ಯವಿದೆ. ಪ್ರಕೃತಿಯ ಚಲನವಲನಗಳನ್ನು ಮನುಷ್ಯನ ದಿನನಿತ್ಯದ ಬದುಕಿಗೆ ಅನ್ವಯಿಸಿಕೊಂಡು ಆ ಮೂಲಕ ಒಳಿತು ಕೆಡುಕುಗಳನ್ನು ಅಂದಾಜಿಸುವುದಕ್ಕಾಗಿ ಶಕುನ ಶಾಸ್ತ್ರ ಎಂಬುದನ್ನು ಆಧರಿಸಿ ಪುರಾತನ ಕಾಲದಿಂದಲೂ ಶಕುನಗಳ ಬಗ್ಗೆ ಅನೇಕರು ನಂಬಿಕೆ ಇರಿಸಿಕೊಂಡಿದ್ದಾರೆ. ಶಕುನ ಶಾಸ್ತ್ರಗಳಂತೆಯೇ ಸ್ವಪ್ನ(ಕನಸು)ಗಳಿಗೆ ಸಂಬಂಧಿಸಿದ ಒಳಿತು-ಕೆಡುಕುಗಳನ್ನು ಅಂದಾಜಿಸುವುದಕ್ಕೂ ಸ್ವಪ್ನ ಶಾಸ್ತ್ರ ಎಂಬ ವಿಷಯವನ್ನು ಪುರಾತನ ಕಾಲದ ಭಾರತದಲ್ಲಿ ಉಲ್ಲೇಖಿಸಲಾಗಿದೆ.
ಶಕುನ ಮುಂದಾಗುವುದನ್ನು ಸಾಂಕೇತಿಕವಾಗಿ ಸೂಚಿಸುತ್ತದೆ ಎಂಬುದು ಒಂದು ಸಾಮಾನ್ಯ ನಂಬಿಕೆ. ಮುಂದಾಗುವುದು ಅಂದರೆ ಅದು ಒಳ್ಳೆಯದೂ ಆಗಬಹುದು, ಕೆಟ್ಟದ್ದೂ ಆಗಬಹುದು. ಈ ಹಿನ್ನೆಲೆಯಲ್ಲಿ ಒಳ್ಳೆಯ ಶಕುನ, ಕೆಟ್ಟ ಶಕುನ ಎಂದು ಹೆಸರಿಸುವುದು ವಾಡಿಕೆ.
ವಾಹನಗಳ ಮೇಲೆ ಕಾಗೆ ಕೂತ್ರೆ ಅಪಶಕುನಾನ?
ನಂಬಿಕೆಗಳ ಪ್ರಕಾರ ವಾಹನಗಳ ಮೇಲೆ ಅಥವಾ ಮನೆಯೊಳಗೆ, ನೆತ್ತಿಗೆ ಕುಕ್ಕಿದರೆ ಅದು ಅಪಶಕುನ ಎಂದು ಭಾವಿಸಲಾಗಿದೆ. ಕಾಗೆಗಳನ್ನು ಪಿತೃದೇವತೆಯೆಂದು ಭಾವಿಸಲಾಗಿದೆಯಾದರೂ ಕಾಗೆ ಸ್ಪರ್ಷವಾದರೆ ಅದನ್ನು ಅಪಶಕುನ ಎಂದು ಭಾವಿಸಲಾಗಿದೆ. ಇನ್ನು ಕೆಲವರು ಪ್ರಯಾಣ ಮಾಡುವ ಸಂದರ್ಭದಲ್ಲಿ ಕಾಗೆಯ ಶಕುನ ನೋಡುತ್ತಾರೆ. ಕಾಗೆ ಎಡಭಾಗದಲ್ಲಿ ಕೂಗುತ್ತಾ ಹಿಂದಿನಿಂದ ಬರುತ್ತಿದ್ದರೆ ಇದರಿಂದ ಲಾಭ ಇದೆ ಎಂದು ತಿಳಿಯುತ್ತಾರೆ.
ಕಾಗೆ ಮನೆಯ ಎದುರು ಬಂದು ಕೂಗುವ ಧ್ವನಿಯಿಂದ ನೆಂಟರು ಬರುವ ಸೂಚನೆ ಎಂದು ನಂಬಿಕೆ. ಕಾಗೆಗಳ ಬೇರೆ ಬೇರೆ ಚೇಷ್ಟೆಯಿಂದ ಬೇರೆ ಬೇರೆ ಘಟನೆ ನಡೆಯುವ ನಂಬಿಕೆಯನ್ನು ಇಂದಿಗೂ ಇಟ್ಟುಕೊಂಡಿದ್ದಾರೆ. ಕೆಲವರು ಪ್ರಯಾಣ ಮಾಡುವ ಸಂದರ್ಭದಲ್ಲಿ ಕಾಗೆಯ ಶಕುನ ನೋಡುತ್ತಾರೆ. ಕಾಗೆ ಎಡಭಾಗದಲ್ಲಿ ಕೂಗುತ್ತಾ ಹಿಂದಿನಿಂದ ಬರುತ್ತಿದ್ದರೆ ಇದರಿಂದ ಲಾಭ ಇದೆ ಎಂದು ತಿಳಿಯುತ್ತಾರೆ.
ಎಡ ಭಾಗದಲ್ಲಿ ಕೂಗಿ ಎದುರಾಗಿ ಬರುತ್ತಿದ್ದರೆ ಏನಾದರೂ ತೊಂದರೆ ಇದೆ ಎಂದು ತಿಳಿಯುತ್ತಾರೆ. ಕೂಗಿಕೊಂಡು ಎದುರಿಗೆ ಬಂದರೆ ಕೈಗೊಂಡ ಕೆಲಸ ಕಾರ್ಯಗತವಾಗುವುದಿಲ್ಲ. ಕಾಗೆ ಮನೆಯ ಒಳಗೆ ಬರಬಾರದು. ಕಾಗೆಗಳು ಕೊಕ್ಕಿನಿಂದ ಅಥವಾ ರೆಕ್ಕೆಯಿಂದ ಮನುಷ್ಯನ ಮೇಲೆ ದಾಳಿ ಮಾಡಿದರೆ ಶತ್ರುಗಳು ಜಾಸ್ತಿಯಾಗುತ್ತಾರೆ ಎಂಬ ನಂಬಿಕೆ ಇದೆ. ಹಿಂದಿನ ಕಾಲದಲ್ಲಿ ರಾಜರ ರಥಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತಿತ್ತು. ಆದ್ದರಿಂದ ರಥದ ಮೇಲೆ ಕಾಗೆ ಕೂತರೆ ರಾಜರಿಗೆ ರಾಜ್ಯ ನಷ್ಟ ಅಥವಾ ಬೇರೆ ರೀತಿಯ ಸಮಸ್ಯೆ ಉಂಟಾಗಲಿದೆ ಎಂದೂ ಹೇಳಲಾಗಿದೆ. ಆದರೆ ಈಗಿನ ಕಾಲದಲ್ಲಿ ರಾಜರು ಹಾಗೂ ರಥ ಎರಡಕ್ಕೂ ಹೆಚ್ಚಿನ ಮಹತ್ವವಿಲ್ಲದ ಕಾರಣ ವಾಹನಗಳ ಮೇಲೆ ಕಾಗೆ ಕೂತರೂ ಅದು ಅಪಶಕುನವಾಗುವುದಿಲ್ಲ.
ಮನೆಯ ಮುಂದೆ ಅಥವಾ ಮೇಲೆ ಕುಳಿತು ಕಾಗೆ ಕೂಗಿದರೆ ಮನೆಗೆ ನೆಂಟರು ಬರುವುದರ ಮುನ್ಸೂಚನೆ ಎಂಬ ಪ್ರತೀತಿ ಇದೆ. ಕಾಗೆಯೊಂದು ಮನೆಯೊಳಕ್ಕೆ ನುಗ್ಗಿದರೆ ಅದೊಂದು ಕೇಡು ಶಕುನವೆಂದು ಪರಿಗಣಿಸಿ, ಪುರೋಹಿತರಿಂದ ಪುಣ್ಯಾರ್ಚನೆ ಮಾಡಿಸುವುದುಂಟು. ಹಾಗೆಯೇ ಕಾಗೆ ವ್ಯಕ್ತಿಯ ತಲೆಗೆ ಬಡಿದರೆ ಅದು ಕೆಟ್ಟ ಶಕುನವೆಂಬ ನಂಬಿಕೆ ಚಾಲ್ತಿಯಲ್ಲಿದೆ. ಹಾಗಾಗಿ ಶನಿ ಮಹಾತ್ಮನ ದರ್ಶನ ಮಾಡುವುದು ಸೂಕ್ತ.
ಯಾವ ಶಕುನಕ್ಕೆ ಯಾವ ದೇವರ ಆರಾಧನೆಯಿಂದ ದೋಷ ಮುಕ್ತರಾಗಬಹುದು?
ಮನೆಯಲ್ಲಿ ಯಾರಾದರೂ ಮಾತನಾಡುತ್ತಿದ್ದಾಗ ಹಲ್ಲಿ ಏನಾದರೂ ಲೊಚಗುಟ್ಟಿದರೆ ಆ ಮಾತು ನಿಜವಾಗುತ್ತದೆ ಎಂದು ನಂಬಿ ಕೃಷ್ಣ ಕೃಷ್ಣ ಅಂತಲೋ, ರಾಮ ರಾಮ, ಶಿವ ಶಿವ ಎಂತಲೋ ಹೇಳುವುದು ವಾಡಿಕೆ. ದೇವರನ್ನು ನೆನೆಯುವುದು ಮತ್ತು ಆ ಮೂಲಕ ಆಡಿದ ಮಾತನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳುವುದು ಸಹಜವೇ ಆಗಿದೆ. ಆದರೆ, ಅದನ್ನೊಂದು ಸಂಪ್ರದಾಯವಷ್ಟೇ ಎಂದು ನಾವು ಅರ್ಥ ಮಾಡಿಕೊಂಡರೆ ಸಾಕು.
ಅದೇ ಹಲ್ಲಿ ಮೈಮೇಲೆ ಬಿದ್ದರೆ ಕೆಟ್ಟದ್ದು ಎಂಬ ನಂಬಿಕೆ ಸಾರ್ವತ್ರಿಕವಾಗಿದೆ. ಹಾಗಾಗಿ ಇದೊಂದು ಕೆಟ್ಟ ಶಕುನವೇ ಹೌದೆಂದು ನಂಬಲಾಗಿದೆ. ಈ ಹಲ್ಲಿ ದೋಷ ಪರಿಹಾರಕ್ಕಾಗಿ ಆ ವ್ಯಕ್ತಿ ತಣ್ಣೀರಿನಲ್ಲಿ ಸ್ನಾನ ಮಾಡಿ, ದೇವರಿಗೆ ತುಪ್ಪದ ದೀಪ ಹಚ್ಚಬೇಕು ಮತ್ತು ಕಂಚಿ ಕಾಮಾಕ್ಷಿ ದೇವಾಲಯಕ್ಕೆ ಹೋಗಿಬರುವುದು. ಅದಾಗದಿದ್ದರೆ ಕೊನೆ ಪಕ್ಷ ಕಾಮಾಕ್ಷಿ ದೇವಾಲಯದ ಹಲ್ಲಿ ದರ್ಶನ ಮಾಡಿದವರನ್ನು ಮಾತನಾಡಿಸಿದರೆ ಹಲ್ಲಿ ಬಿದ್ದ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ವಾಸ್ತವವಾಗಿ ಹಲ್ಲಿ ಒಂದು ವಿಷಪೂರಿತ ಪ್ರಾಣಿ. ಆ ಹೆದರಿಕೆಯೇ ಈ ರೀತಿಯ ಕೆಟ್ಟ ಶಕುನ ಎಂಬುದಕ್ಕೆ ಭಾಜನವಾಗಿದೆ ಎಂದೆನ್ನಬಹುದು.
ಬೆಳಗಾಗೆದ್ದು ನರಿ ಮುಖ ನೋಡಿದರೆ ಅದೊಂದು ಒಳ್ಳೆಯ ಶಕುನ ಎಂಬ ನಂಬಿಕೆ ಪ್ರಚಲಿತವಿದೆ. ನರಿ ತನ್ನ ಕಿಲಾಡಿತನಕ್ಕೆ ಹೆಸರಾಗಿರುವುದರಿಂದ ನಮ್ಮ ಗ್ರಾಮೀಣ ವಲಯದಲ್ಲಿ ಈ ರೀತಿ ನಂಬಿಕೆ ಬರಲು ಕಾರಣವಾಗಿದೆ. ಹಾಗಾಗಿಯೇ ಕೆಲವರ ಮನೆಗಳಲ್ಲಿ ಜೋಡಿ ನರಿಗಳ ಭಾವಚಿತ್ರವನ್ನು ಗೋಡೆಗೆ ತಗುಲಿ ಹಾಕುವುದುಂಟು. ಹಾಗೆಯೇ ನರಿಯು ಹೊಲ, ತೊಲ, ಗದ್ದೆಗಳಲ್ಲಿ ಊಳಿಡುವುದು ಶುಭ ಶಕುನ ಅಂತ ಕೆಲವು ಪ್ರದೇಶಗಳಲ್ಲಿ ನಂಬಿಕೆ ಇದೆ.
ರಾತ್ರಿ ಹೊತ್ತು ನಾಯಿ ಯಾವುದಾದರೊಂದು ಮನೆ ಮುಂದೆ ತನ್ನ ಮುಖವನ್ನು ಆಗಸಕ್ಕೆ ಮಾಡಿ ಊಳಿಡುವುದು (ಕೂಗುವುದು) ಕೆಟ್ಟ ಶಕುನವೆಂದು ನಂಬಲಾಗಿದೆ. ಅದು ಹಾಗೆ ಊಳಿಡಲು ಮುಖ್ಯ ಕಾರಣ – ಯಮಧರ್ಮರಾಯ ಕೋಣದ ಮೇಲೆ ಕುಳಿತುಕೊಂಡು ಬರುತ್ತಿರುವುದು ಅದರ ಕಣ್ಣಿಗೆ ಕಾಣಿಸುವುದೆಂದೂ, ಅದರಿಂದ ಆ ಮನೆಯಲ್ಲಿ ಅಥವಾ ಆ ಬೀದಿಯಲ್ಲಿ ಯಾರಾದರೂ ಸಾಯುವುದು ನಿಶ್ಚಿತವೆಂಬ ನಂಬಿಕೆಯ ಮೇಲೆ ಇದೊಂದು ಕೆಟ್ಟ ಶಕುನವೆಂದು ಪ್ರಚಲಿತದಲ್ಲಿದೆ.
ವಿಷಯವೊಂದನ್ನು ಕುರಿತು ಮಾತನಾಡುತ್ತಿರುವಾಗ ಕತ್ತೆ ಕಿರುಚಿದರೆ ಅದೊಂದು ಶುಭಶಕುನವೆಂದು ಪರಿಗಣಿಸಲಾಗುತ್ತದೆ. ಆದರೆ ಎಲ್ಲಿಗಾದರೂ ಪ್ರಯಾಣ ಹೊರಟಾಗ ಬೆಕ್ಕು ಅಡ್ಡಬಂದರೆ ಅಪಶಕುನವೆಂಬ ಪ್ರತೀತಿ ಇಂದಿಗೂ ಗಾಢವಾಗಿದೆ.
ಗೂಬೆ ಮನೆಯ ಮೇಲೆ ಕೂತರೆ ಕೆಟ್ಟ ಶಕುನದ ಸೂಚಕವೆಂದು ಗ್ರಾಮೀಣ ವಲಯಗಳಲ್ಲಿ ನಂಬಿಕೆ ಇದೆ. ಅದು ಕೂತಂಥ ಮನೆಗೆ ದಾರಿದ್ರ್ಯ ತಟ್ಟುವುದು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ಶಕುನ ರೂಢಿಯಲ್ಲಿರುವುದು ಕಂಡು ಬರುತ್ತದೆ. ಹಗಲು ಹೊತ್ತಿನಲ್ಲಿ ನಿದ್ರೆ ಮಾಡುವ ಅದರ ಗುಣಲಕ್ಷಣವನ್ನು ಈ ರೀತಿ ಅರ್ಥೈಸಲಾಗಿದೆ ಎಂದು ನಾವು ಭಾವಿಸಬಹುದು…..