ಬೆಂಗಳೂರು:
ತಾಂತ್ರಿಕತೆಯ ಮಾಂತ್ರಿಕ, ಪ್ರೇಮಲೋಕದ ಕನಸುಗಾರ, ರಸಿಕತನದ ಸಾಹುಕಾರ, ಮಲ್ಲರ ಮಲ್ಲ ಹಠವಾದಿ, ಕ್ರೇಜಿ ಲೋಕದ ಕ್ರೇಜಿಸ್ಟಾರ್, ಸ್ಪೈಲಿಶ್ಗೆ ಶೋಮ್ಯಾನ್ ಅಂದ್ರೆ ವೀರಸ್ವಾಮಿ ರವಿಚಂದ್ರನ್. ಸಿನಿಮಾಗಳ ವಿಚಾರದಲ್ಲಿ ರವಿಚಂದ್ರನ್ ಅಪ್ಪಟ ಮಾಂತ್ರಿಕ. ಹೂವು, ಹಣ್ಣು, ಹೆಣ್ಣನ್ನು ಮೋಹಕವಾಗಿ ತೋರಿಸೋ ಕ್ರೇಜಿಸ್ಟಾರ್ ಕನ್ನಡ ಚಿತ್ರರಂಗ ಕಂಡ ಅದ್ಬುತ ಟೆಕ್ನಿಷಿಯನ್. ಹೀಗಾಗಿ ರವಿಚಂದ್ರನ್ ಸಿನಿಮಾಗಳು ಅಂದ್ರೆ ಅಂದು-ಇಂದು ಎಂದೆಂದಿಗೂ ಒಂದು ಕುತೂಹಲ ಇದ್ದೇ ಇರುತ್ತೆ. ಹೀಗೆ ಈಗಲೂ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ರವಿಚಂದ್ರನ್ ಸಿನಿಮಾ ಜೊತೆ ಜೊತೆಗೆ ಸೋಷಿಯಲ್ ಮೀಡಿಯಾಕ್ಕೆ ಎಂಟ್ರಿ ಕೊಡ್ತಿದ್ದಾರೆ. ನೆಟ್ವರ್ಲ್ಡ್ ಲೋಕದಲ್ಲಿ ಹೊಸ ಕ್ರೇಜ್ ಹುಟ್ಟು ಹಾಕಲು ಬರ್ತಿದ್ದಾರೆ.
ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾ ಬಳಸದೇ ಇರುವವರೇ ಕಡಿಮೆ. ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಮುಳುಗಿ ಹೋಗಿರುತ್ತಾರೆ. ಅದ್ರಲ್ಲೂ ಸೆಲಬ್ರೆಟಿಗಳು ಕೇಳೋದೆ ಬೇಡ, ಫೋಟೋಶೂಟ್ನಿಂದ ಹಿಡಿದು ಸಿನಿಮಾ ಪ್ರೋಮೋಷನ್ವರೆಗೂ ಅಪ್ಡೇಟ್ ಮಾಡ್ತಾನೆ ಇರ್ತಾರೆ. ಈಗ ಇವರ ಸಾಲಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿಕೊಂಡಿದ್ದಾರೆ. ಹೌದು ಇಷ್ಟು ದಿನ ಸೋಷಿಯಲ್ ಮೀಡಿಯಾ ಸಹವಾಸ ಬೇಡ ಅಂತ ದೂರ ಉಳಿದ ಕ್ರೇಜಿಸ್ಟಾರ್, ಈಗ ಸೋಷಿಯಲ್ ಮೀಡಿಯಾಕ್ಕೆ ಎಂಟ್ರಿ ಕೊಡೋಕ್ಕೆ ರೆಡಿಯಾಗ್ತಿದ್ದಾರೆ.
ಟ್ವಿಟರ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ಗೆ ಕ್ರೇಜಿಸ್ಟಾರ್ ಲಗ್ಗೆ ಇಡಲಿದ್ದಾರೆ. ಇದರ ಬಗ್ಗೆ ಫಿಲ್ಮ್ ಸ್ಟೈಲ್ನಲ್ಲಿ ಸೂಚನೆ ನೀಡಿದ್ದಾರೆ. ಯೆಸ್ ನೆಟ್ವರ್ಲ್ಡ್ಗೆ ‘ಕಮಿಂಗ್ ಸೂನ್’ ಅಂತ 10 ಸೆಕೆಂಡ್ ಟೀಸರ್ ರಿವೀಲ್ ಮಾಡಿದ್ದಾರೆ. ಇನ್ಮುಂದೆ ಡೈರೆಕ್ಟ್ ಆಗಿ ಕ್ರೇಜಿಸ್ಟಾರ್ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದು, ಸಿನಿಮಾದ ಬಗ್ಗೆ ಅಪ್ಡೇಟ್ ಕೊಡ್ತಾರೆ. ಆದ್ರೆ ರವಿಮಾಮ ಯಾವಾಗ ನೆಟ್ ವರ್ಲ್ಡ್ಗೆ ಎಂಟ್ರಿ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ……