Breaking News

ಒಂದೇ ಮನೆಯಲ್ಲಿ ನಡೆಯುವ ಕಥೆಯುಳ್ಳ ಸಕುಟುಂಬ ಸಮೇತ..!

SHARE......LIKE......COMMENT......

ಬೆಂಗಳೂರು:

ನಟ ರಕ್ಷಿತ್‌ ಶೆಟ್ಟಿ ಹೊಸ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ತಾವೇ ನಿರ್ದೇಶನ ಮಾಡುವ ಸಿನಿಮಾ ತಯಾರಿಯನ್ನೂ ಜತೆಯಾಗೇ ಮಾಡುತ್ತಿರುತ್ತಾರೆ. ಈಗ ನಿರ್ಮಾಣಕ್ಕೂ ಮುಂದಾಗಿರುವ ಅವರು ‘ಸಕುಟುಂಬ ಸಮೇತ’ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಚಿತ್ರವನ್ನು ರಾಹುಲ್‌ ಪಿ.ಕೆ. ನಿರ್ದೇಶನ ಮಾಡುತ್ತಿದ್ದು, ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿದೆ. ಇನ್ನು ಮುಂದೆ ನಿರಂತರವಾಗಿ ಸಿನಿಮಾ ನಿರ್ಮಾಣ ಮಾಡಲಿರುವುದಾಗಿಯೂ ಹೇಳಿದ್ದಾರೆ.

‘ಸಕುಟುಂಬ ಸಮೇತ ಚಿತ್ರ ಕುಟುಂಬದವರೆಲ್ಲರೂ ಒಟ್ಟಾಗಿ ಬಂದು ನೋಡಬಹುದಾದ ಸಿನಿಮಾ. ಎಲ್ಲರ ಜೀವನದಲ್ಲಿ ನಡೆಯುವಂಥ ಘಟನೆ. ಇಷ್ಟೊಂದು ಪಾತ್ರಗಳನ್ನು ಇಟ್ಟುಕೊಂಡು ಒಂದು ಮನೆಯಲ್ಲೇ ಕಥೆ ಹೇಳೋದು ಚಾಲೆಂಜಿಂಗ್‌. ಹಾಸ್ಯದೊಂದಿಗೆ ಡ್ರಾಮಾ ಕೂಡ ಇದೆ. ಲವ್‌ ಸ್ಟೋರಿಯೂ ಇದೆ. ಪ್ರತಿಯೊಂದು ಕ್ಯಾರೆಕ್ಟರ್‌ ವಿಭಿನ್ನವಾಗಿದೆ. ತುಂಬಾ ಚೆನ್ನಾಗಿ ಸ್ಕ್ರಿಪ್ಟ್‌ ಮಾಡಿದ್ದಾರೆ’ ಎಂದಿದ್ದಾರೆ ರಕ್ಷಿತ್‌.

ಬಂಡವಾಳ ವಾಪಸ್ ಪಡೆಯುಬಹುದು

‘ಈ ಸಬ್ಜೆಕ್ಟ್‌ಗೆ ಹಾಕಿದ ಬಜೆಟ್‌ ಅನ್ನು ಸುಲಭವಾಗಿ ಹಿಂದಕ್ಕೆ ಪಡೆಯಬಹುದು ಎನ್ನಿಸಿತು. ಕಥೆ ತುಂಬಾ ಚೆನ್ನಾಗಿದೆ. ಮಲ್ಟಿಪ್ಲೆಕ್ಸ್‌ನಲ್ಲಿ ಮತ್ತು ಓಟಿಟಿಯಲ್ಲಿ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತೆ ಎಂಬ ನಂಬಿಕೆ ಇತ್ತು. ಎಲ್ಲಾ ವಯಸ್ಸಿನವರು ಇಷ್ಟಪಡುವ ಸಿನಿಮಾ ಇದಾಗಲಿದೆ. ರಾಹುಲ್‌ ‘ಉಳಿದವರು ಕಂಡಂತೆ’ ಸಿನಿಮಾ ಸಮಯದಿಂದಲೂ ನನ್ನ ಜತೆ ಕೆಲಸ ಮಾಡುತ್ತಿದ್ದಾನೆ. ಅವನು ನಿರ್ದೇಶನ ಮಾಡಬಲ್ಲ ಎಂಬ ನಂಬಿಕೆ ಇತ್ತು. ಈ ಚಿತ್ರದ ಸ್ಕ್ರಿಪ್ಟ್‌ ಹೇಳಿದಾಗ ಬಹಳ ಯುನೀಕ್‌ ಎನ್ನಿಸಿತು. ಮನೆಯಲ್ಲೇ ನಡೆಯುವ ಕಥೆ. ಇಂಟರೆಸ್ಟಿಂಗ್‌ ಎನ್ನಿಸಿತು. ಹಾಗಾಗಿ ನಿರ್ಮಾಣ ಮಾಡೋಣ ಎಂದು ನಿರ್ಧರಿಸಿದೆ. ಇನ್ನು ಮುಂದೆ ಸಿನಿಮಾ ನಿರ್ಮಾಣ ಮಾಡುತ್ತಾ ಹೋಗಬೇಕೆಂದಿದ್ದೇನೆ. ಒಟ್ಟಿಗೆ ಮೂರ್ನಾಲ್ಕು ಸಿನಿಮಾಗಳ ಪ್ಲ್ಯಾನಿಂಗ್ ನಡೀತಿದೆ. ಅದರಲ್ಲಿ ಇದು ಮೊದಲನೆಯದು. ಒಂದಾದ ಮೇಲೆ ಒಂದರಂತೆ ಸಿನಿಮಾ ಮಾಡಲಿದ್ದೇವೆ. ‘ಸಕುಟುಂಬ ಸಮೇತ’ ಒಳ್ಳೆಯ ಮನರಂಜನೆ ನೀಡುವ ಸಿನಿಮಾ’ ಎಂದಿದ್ದಾರೆ ರಕ್ಷಿತ್‌.

ಈ ಚಿತ್ರದಲ್ಲಿ ಹುಡುಗ ಹುಡುಗಿಯ ನಡುವಿನ ನಿಶ್ಚಿತಾರ್ಥ ಮುರಿದುಬೀಳುತ್ತದೆ ಎನ್ನುವಾಗ ಎರಡು ಕುಟುಂಬಗಳೂ ಏನು ಮಾಡುತ್ತವೆ ಎನ್ನುವುದನ್ನು ಹ್ಯೂಮರಸ್‌ ಆಗಿ ಹೇಳಲಿದ್ದಾರೆ ರಾಹುಲ್‌. ‘ಹಲವು ವರ್ಷಗಳಿಂದ ರಕ್ಷಿತ್‌ ಜತೆ ಕೆಲಸ ಮಾಡುತ್ತಾ ಬಂದಿದ್ದೆ. ಲಾಕ್‌ಡೌನ್‌ ಸಮಯದಲ್ಲಿ ಸುಲಭವಾಗಿ ಕಡಿಮೆ ದಿನಗಳಲ್ಲಿ, ಕಡಿಮೆ ಬಜೆಟ್‌ನಲ್ಲಿ ಮಾಡಬಹುದಾದ ಒಂದು ಸಿನಿಮಾ ಸ್ಕ್ರಿಪ್ಟ್ ಮಾಡಬೇಕು ಅಂತ ಅವರು ಹೇಳಿದಾಗ ಹುಟ್ಟಿಕೊಂಡ ಕಥೆ ಇದು. ಹಿಂದೆ ಬರುತ್ತಿದ್ದ ಅನಂತ್‌ನಾಗ್‌ ಅವರ ಸಿನಿಮಾಗಳ ರೀತಿಯ ಚಿತ್ರ ಇದು ಎನ್ನಬಹುದು. ಎರಡು ಕುಟುಂಬಗಳ ಕಥೆ ಚಿತ್ರದಲ್ಲಿದೆ. ಮದುವೆ ನಡೆಯುವಾಗ ಏನೆಲ್ಲಾ ನಡೆಯುತ್ತದೆ ಎನ್ನುವುದು ಸಿನಿಮಾದಲ್ಲಿದೆ. ನಾನು ಮತ್ತು ಪೂಜಾ ಸುಧೀರ್‌ ಸೇರಿ ಸ್ಕ್ರೀನ್‌ಪ್ಲೇ, ಡೈಲಾಗ್‌ ಮಾಡಿದ್ದೇವೆ’ ಎಂದಿದ್ದಾರೆ ರಾಹುಲ್‌.

ಸಿರಿ ಮತ್ತು ಭರತ್‌ ಯಂಗ್‌ ಕಪಲ್‌ ಆಗಿ ನಟಿಸುತ್ತಿದ್ದಾರೆ. ಅಚ್ಯುತ್‌ ಕುಮಾರ್‌, ಕೃಷ್ಣ ಹೆಬ್ಬಾಲೆ, ಪುಷ್ಪಾ ಬೆಳವಾಡಿ, ರೇಖಾ ಕೂಡ್ಲಿಗಿ, ಜಯಲಕ್ಷ್ಮಿ ಪಾಟೀಲ್‌ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ‘ಎರಡು ಕುಟುಂಬಗಳ ನಡುವಿನ ಸ್ಟೇಟಸ್‌ ಬೇರೆ ಬೇರೆ ಇರುತ್ತದೆ. ಮದುವೆ ವಿಚಾರದಲ್ಲಿ ಇದು ಹೇಗೆ ಪರಿಣಾಮ ಬೀರುತ್ತೆ ಅನ್ನೋದನ್ನು ತೋರಿಸಿದ್ದೇವೆ. ಪ್ರತಿಯೊಂದು ಪಾತ್ರವೂ ವಿಶಿಷ್ಟ. ಅಚ್ಯುತ್‌ ಫೆನಾಮಿನಲ್‌ ನಟ. ನಾನು ಹೇಳಿದ್ದಕ್ಕಿಂತ ವಿಶೇಷವಾಗಿ ನಟಿಸಿ ಜೀವ ತುಂಬುತ್ತಾರೆ. ಅದನ್ನು ನಾನೂ ಕಲ್ಪಿಸಿಕೊಂಡಿರಲ್ಲ. ಅದೇ ರೀತಿ ಎಲ್ಲರೂ ರಂಗಭೂಮಿ ಅನುಭವ ಇರುವವರು, ಚೆನ್ನಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿವೆ. ಮಿಧುನ್‌ ಮುಕುಂದನ್‌ ಸಂಗೀತ ಸಂಯೋಜನೆ, ಕರಮ್‌ ಚಾವ್ಲಾ ಮತ್ತು ಸಂದೀಪ್‌ ವಲ್ಲೂರಿ ಛಾಯಾಗ್ರಹಣ ಮಾಡಿದ್ದಾರೆ’ ಎಂದಿದ್ದಾರೆ ರಾಹುಲ್‌……