Breaking News

ಶ್ರೀಚಕ್ರವನ್ನ ಮನುಷ್ಯನ ಶರೀರಕ್ಕೆ ಹೋಲಿಸಬಹುದಾ..?

ಶ್ರೀಚಕ್ರವನ್ನ ಪೂಜಿಸಿದರೆ ಇಷ್ಟಾರ್ಥಗಳು ಸಿದ್ಧಿಸುತ್ತದೆಯಾ....

SHARE......LIKE......COMMENT......

ಧರ್ಮ-ಜ್ಯೋತಿ:

ನಿರಾಕಾರ ಪರಬ್ರಹ್ಮ ಸಾಕ್ಷಾತ್ಕಾರಕ್ಕೆ ಇರುವ ಮಾರ್ಗಗಳಲ್ಲಿ ಶ್ರೀಚಕ್ರ ಉಪಾಸನೆಯೂ ಒಂದು. ಮೂಲ ಶ್ರೀಚಕ್ರ ಉದ್ಭವವಾಗಿದ್ದು ಬಂಡಾಸುರ ಎಂಬ ರಾಕ್ಷಸನ ವಧೆಯ ಸಂದರ್ಭದಲ್ಲಿ. ಶಿವನನ್ನು ಕುರಿತು ತಪಸ್ಸು ಮಾಡಿ ವರ ಪಡೆದಿದ್ದ ಬಂಡಾಸುರನ ವಧೆ ಮಾಡಲು ದೇವತೆಗಳೇ ಮೇರು ಪರ್ವತದ ತಪ್ಪಲಿನಲ್ಲಿ ಯಜ್ನ ನಡೆಸಿದಾಗ ಉದ್ಭವಿಸಿದ ಲಲಿತೆ(ಲಲಿತಾ ದೇವಿ)ಯ ಹೆಬ್ಬರಳ ತುದಿಯಿದ್ದ ಬಿಂದುವೇ ಈ ಶ್ರೀಚಕ್ರ.

14 ತ್ರಿಕೋನಗಳು,(ಒಂದು ಕಲ್ಪದ 14 ಮನ್ವಂತರದ ಪ್ರತೀಕ)  9 ಚಕ್ರ (ನಮ್ಮ ದೇಹದಲ್ಲಿರುವ ಷಟ್ ಚಕ್ರಗಳು + ಸಹಸ್ರಾರ + ಕುಲಸಹಸ್ರಾರ + ಅಕುಲಸಹಸ್ರಾರ ಸೇರಿ ಒಟ್ಟು ಒಂಭತ್ತು ಚಕ್ರಗಳನ್ನು ಪ್ರತೀಕ ) ಹಾಗೂ ಮಧ್ಯದಲ್ಲಿ ಬಿಂದುವಿದ್ದ ಶ್ರೀಚಕ್ರವೇ ಬಂಡಾಸುರ ಮರ್ಧನಕ್ಕಾಗಿ ಉದ್ಭವಿಸಿದ ಶ್ರೀಲಲಿತಾ ದೇವಿಗೆ ರಥ. ಶ್ರೀಚಕ್ರದಲ್ಲಿದ್ದ ಘೋರ ಸಂಯುಕ್ತಾಕ್ಷರ( ಬೀಜಾಕ್ಷರ ಮಂತ್ರ)ಗಳ ಸಹಾಯದಿಂದ ಬಂಡಾಸುರನೆಂಬ ರಕ್ಕಸನ ಮರ್ಧನ. ಅಸುರನ ಸಂಹಾರವಾದ ಬಳಿಕವೂ ಶ್ರೀಚಕ್ರದಲ್ಲಿದ್ದ ಘೋರ ಸಂಯುಕ್ತಾಕ್ಷರಗಳು(ಬೀಜಾಕ್ಷರ ಮಂತ್ರಗಳು) ಹಾಗೆಯೇ ಉಳಿದು ಶ್ರೀಚಕ್ರವೆಂಬುದು ಮಹಿಮಾನ್ವಿತ ಚಕ್ರವಾಗಿದ್ದರೂ ಉಗ್ರಶಕ್ತಿ ಸೋಪಾನವಾಗಿತ್ತು. ಅಂದರೆ ಬಂಡಾಸುರನ ವಧೆಯ ನಂತರ ಶ್ರೀಚಕ್ರವಿದ್ದ ದೇವಾಲಯಗಳಲ್ಲಿ ಕತ್ತಲು ಆವರಿಸುವ ವೇಳೆಗೆ ಸಾತ್ವಿಕ ಶಕ್ತಿ ಕುಗ್ಗಿ ಅತಿ ಉಗ್ರ ಸ್ವರೂಪ ಉಗಮಿಸುತ್ತಿತ್ತು. ಇದರಿಂದಾಗಿ ಸೂರ್ಯಾಸ್ತದ ನಂತರ ಜನರ ಸಂಚಾರಕ್ಕೆ ಸಂಚಕಾರ ಉಂಟಾಗುತ್ತಿತ್ತು ಎಂಬ ಪ್ರತೀತಿ.

ಶಂಕರಚಾರ್ಯರು ತಮ್ಮ ಅದ್ವೈತ ಸಿದ್ಧಾಂತದ ಸ್ಥಾಪನೆಗಾಗಿ ಸಾತ್ವಿಕ ಶ್ರೀಚಕ್ರವಾಗಿ ಪರಿಷ್ಕರಣೆ:

ಸಾತ್ವಿಕ ಶ್ರೀಚಕ್ರ ಸ್ಥಾಪನೆಯಾಗಿದ್ದು ಶಂಕರರ ಕಾಲದಲ್ಲಿ. ಶಂಕರರು ತಮ್ಮ ಅದ್ವೈತ ಸಿದ್ಧಾಂತದ ಸ್ಥಾಪನೆಯನ್ನು ಮಾಡಬೇಕಿತ್ತು. ಅದ್ವೈತ ಸಿದ್ಧಾಂತದ ಸ್ಥಾಪನೆಯ ಹಿನ್ನೆಲೆಯಲ್ಲಿ ನಿರಾಕಾರ ಪರತತ್ವದ ಸ್ಥಾಪನೆ, ಪ್ರತಿಮಾ ಪೂಜೆಗಳಿಂದ ಹೊರತಾದ ಪರಬ್ರಹ್ಮದ ಅರ್ಚನೆಯಾಗಬೇಕಿತ್ತು. ಆದರೆ ಸಾಮಾನ್ಯ ಜನರಿಗೆ ಆಕಾರ ಸಹಿತವಾಗಿರುವ ದೇವ-ದೇವಿಯರುನ್ನು ಪೂಜಿಸಿಯೇ ರೂಢಿ. ಈ ಹಿನ್ನೆಲೆಯಲ್ಲಿ ಆಕಾರ ಸಹಿತವಾದ ಪ್ರತಿಮೆ, ನಿರಾಕಾರವಾಗಿರುವ ಪರಬ್ರಹ್ಮ ಎರಡರ ಮಧ್ಯದಲ್ಲಿ ಒಂದು ಸಾಧನ ಬೇಕಿತ್ತು. ಅದಕ್ಕಾಗಿ ಶಂಕರರು ಶ್ರೀಚಕ್ರವನ್ನು ಆಯ್ಕೆ ಮಾಡಿಕೊಂಡರು. ಆದರೆ ಅಸುರನ ವಧೆಯಿಂದ ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀಚಕ್ರ ವನ್ನು ಯಥಾಸ್ಥಿತಿಯಲ್ಲಿ ಉಪಾಸನೆ  ಜನಸಾಮಾನ್ಯರಿಗೆ ಸಾಧ್ಯವಿರಲಿಲ್ಲ. ಶ್ರೀಚಕ್ರವಿದ್ದಲ್ಲಿಗೆ ಹೋಗಿ ಶ್ರೀಚಕ್ರವನ್ನು ಪರಿಷ್ಕರಿಸಿ ಸಾತ್ವಿಕ ರೂಪವು ಉಗಮಿಸುವಂತೆ ಸಾತ್ವಿಕ ಶ್ರೀಚಕ್ರ ಸ್ಥಾಪನೆ ಮಾಡಬೇಕು. ಅದು ಸಾಧ್ಯವಾದರೆ, ಆ ಶ್ರೀಚಕ್ರಾರ್ಚನೆ ಮೂಲಕ ಪ್ರತಿಮಾ ಪೂಜೆಯನ್ನು ಮೀರಿ ನಿರಾಕಾರ ಪರಬ್ರಹ್ಮದ ಕಡೆಗೆ ಹೋಗುವ ಪಥದಲ್ಲಿ ಒಂದು ಸಾಧನವನ್ನು ಸ್ಥಾಪನೆ ಮಾಡಿದಂತಾಗುತ್ತದೆ ಎಂಬ ನಿರ್ಧಾರ ಶಂಕರರದ್ದು.

ಉಗ್ರ ಶಕ್ತಿಯ ಶ್ರೀಚಕ್ರಗಳಿದ್ದ ದೇವಾಲಯಗಳ ಪೈಕಿ ಅತಿ ಉಗ್ರ ಶ್ರೀಚಕ್ರ ಇದ್ದದ್ದು ಮಧುರೆಯ ಮೀನಾಕ್ಷಿ ದೇವಾಲಯದಲ್ಲಿ. ಶ್ರೀಚಕ್ರವನ್ನು ಸಾತ್ವಿಕ ಸ್ವರೂಪವಾಗಿ ಪರಿಷ್ಕರಿಸಲು ಶಂಕರಾಚಾರ್ಯರು ಮಧುರೆಯ ಮೀನಾಕ್ಷಿ ದೇವಾಲಯವನ್ನೇ ಆಯ್ಕೆ ಮಾಡಿಕೊಂಡರು. ಸಂಖ್ಯಾಶಾಸ್ತ್ರ, ಅಕ್ಷರ ಶಾಸ್ತ್ರದ ಅನುಗುಣವಾಗಿ ಘೋರ ಮಂತ್ರಗಳನ್ನು (ಘೋರಾಕ್ಷರ) ತೆಗೆದು ತ್ರಿಕೋನಗಳ ಸಹಿತ ಸಾತ್ವಿಕ ಅಕ್ಷರಗಳನ್ನು ರಚಿಸಿ, ಸಾತ್ವಿಕ ಬೀಜಾಕ್ಷರಗಳ ಅಳವಡಿಕೆಯಿಂದ ಶ್ರೀಚಕ್ರದ ಪರಾಶಕ್ತಿಯ ಚಟುವಟಿಕೆಯನ್ನು ನಿಗ್ರಹಿಸಿದರು. ಸಾತ್ವಿಕ ಶ್ರೀಚಕ್ರ ಸೃಷ್ಟಿಯಾಗಿದ್ದು ಹೀಗೆ.

ಶ್ರೀಚಕ್ರವನ್ನ ಮನುಷ್ಯನ ಶರೀರಕ್ಕೆ ಹೋಲಿಸಬಹುದಾ?

ಶ್ರೀ ಚಕ್ರವನ್ನು ಮನುಷ್ಯನ ಶರೀರದೊಂದಿಗೆ ಕೂಡ ಹೋಲಿಸಬಹುದು, ಮೇಲ್ಮುಖವಾಗಿರುವ ಚಕ್ರಗಳು ನಾಭಿಯ (ಹೊಕ್ಕಳಿನ) ಮೇಲ್ಭಾಗವನ್ನು ಪ್ರತಿನಿಧಿಸಿದರೆ, ಕೆಳಗಿನ ಚಕ್ರಗಳು ಹೊಕ್ಕಳಿನ ಕೆಳಗಿನ ಚಕ್ರಗಳನ್ನು ಪ್ರತಿನಿಧಿಸುತ್ತದೆ. ಶಕ್ತಿಕೋನಗಳು (ತ್ರಿಕೋನ) ನಮ್ಮ ಚರ್ಮ, ರಕ್ತ, ಮೆದುಳು, ಮಾಂಸಖಂಡಗಳು ಮತ್ತು ಎಲುಬುಗಳನ್ನು ಪ್ರತಿನಿಧಿಸುತ್ತವೆ. ಶಿವಕೋನಗಳು ಆತ್ಮ, ಪ್ರಾಣ, ತೇಜಸ್ಸು ಮತ್ತು ವೀರ್ಯ ಕಣಗಳು ಅಥವಾ ಅಂಡಾಣುಗಳನ್ನು ಪ್ರತಿನಿಧಿಸುತ್ತವೆ.

ಶಕ್ತಿಕೋನಗಳು ಸ್ಥೂಲ ವಸ್ತುಗಳನ್ನು ಪ್ರತಿನಿಧಿಸಿದರೆ, ಶಿವಕೋನಗಳು ಸೂಕ್ಷ್ಮ ವಸ್ತುಗಳನ್ನು ಪ್ರತಿನಿಧಿಸುತ್ತವೆ.  ಶ್ರೀಚಕ್ರ ನರ ಚಟುವಟಿಕೆಯ ವೈಜ್ಞಾನಿಕ ವಿವರಣೆಗೆ ಪ್ರೇರಕ ಸೂತ್ರವೂ ಹೌದು. ಈ ಚಕ್ರದ ಚೌಕಟ್ಟು, ಜ್ಞಾನೇಂದ್ರಿಯ ಮಟ್ಟದ ಆಧುನಿಕ ನರಶಾಸ್ತ್ರ ವಿವರಣೆಗೆ ಹೋಲಿಕೆ ಇದೆ ಎಂದು ಹೇಳಲಾಗಿದೆ. ಬಲ ಮೆದುಳು, ದೃಷ್ಟಿ, ಶ್ರವಣಶಕ್ತಿ ಚೇತಕವೆಂದು ನಂಬಿದ್ದ ಋಷಿಗಳು ಮಾನವ ದೇಹ ಕಾರ್ಯಶೀಲತೆಯ ವಿಸ್ತಾರ ಜ್ಞಾನ ಪಡೆದಿದ್ದರಂತೆ.

ಈಜಿಪ್ಟ್ ದೇಶದ ಪಿರಮಿಡ್ ರಚನಾ ಶಾಸ್ತ್ರಕ್ಕೂ ಶ್ರೀಚಕ್ರದ ರೇಖಾಗಣಿತ ರಹಸ್ಯದ ಸಾಮ್ಯತೆ ಇದೆ ಎಂಬ ಅಭಿಪ್ರಾಯವೂ ಇದೆ. ಶ್ರೀಚಕ್ರ ಕೇವಲ ಆಧ್ಯಾತ್ಮಿಕವಾಗಷ್ಟೇ ಅಲ್ಲದೇ ಮನಃಶಾಸ್ತ್ರ ತಜ್ಞರಿಗೂ ವಿದೇಶದ ವಿಜ್ಞಾನಿಗಳಿಗೂ ಸಂಶೋಧನಾತ್ಮಕ ವಿಷಯವಾಗಿದೆ ಎಂದು ಹೇಳಲಾಗಿದೆ……