Breaking News

ಕುತೂಹಲ ಮೂಡಿಸಿದೆ “ಅಲೆಕ್ಸಾ”

ಅದಿತಿ ಪ್ರಭುದೇವ ಅಭಿನಯದ "ಅಲೆಕ್ಸಾ" ಟ್ರೇಲರ್ ಬಿಡುಗಡೆ

SHARE......LIKE......COMMENT......
ಸ್ಯಾಂಡಲ್‌ವುಡ್:

ಅದಿತಿ ಪ್ರಭುದೇವ ಹಾಗೂ ಪವನ್ ತೇಜ್ ನಾಯಕ – ನಾಯಕಿಯಾಗಿ‌ ನಟಿಸಿರುವ, ವಿ.ಚಂದ್ರು ನಿರ್ಮಾಣದ ಹಾಗೂ ಜೀವ ನಿರ್ದೇಶನದ “ಅಲೆಕ್ಸಾ” ಚಿತ್ರದ ಟ್ರೇಲರ್ ಹಾಗೂ ಆಡಿಯೋ (ಹಾಡುಗಳು) ಇತ್ತೀಚಿಗೆ ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಭಾ.ಮ.ಹರೀಶ್, ಹಿರಿಯ ಕಲಾವಿದರಾದ ಸುಂದರರಾಜ್, ಪ್ರಮೀಳಾ ಜೋಷಾಯಿ, ಐಪ್ಲೆಕ್ಸ್ ಆಡಿಯೋ ಸಂಸ್ಥೆಯ ಮೋಹನ್ ಮುಂತಾದ ಗಣ್ಯರು ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು “ಅಲೆಕ್ಸಾ” ಚಿತ್ರದ ಬಗ್ಗೆ ಮಾಹಿತಿ ನೀಡಿದರು.

“ಅಲೆಕ್ಸಾ” ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರ. “ಬುಜಂಗ” ಚಿತ್ರದ ನಂತರ ನಾನು ನಿರ್ದೇಶಿಸಿರುವ ಎರಡನೇ ಚಿತ್ರವಿದು. ಚಿತ್ರತಂಡದ ಸಹಕಾರದಿಂದ “ಅಲೆಕ್ಸಾ” ಚೆನ್ನಾಗಿ ಮೂಡಿಬಂದಿದೆ. ಡಿಸೆಂಬರ್ 29 ನಮ್ಮ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ. ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ಎಂದರು ನಿರ್ದೇಶಕ ಜೀವ.

ನಾನು ಈ ಚಿತ್ರದಲ್ಲಿ ಇನ್ವೆಸ್ಟಿಕೇಶನ್ ಪೊಲೀಸ್ ಆಫೀಸರ್. “ಅಲೆಕ್ಸಾ” ನನ್ನ ಪಾತ್ರದ ಹೆಸರು. ನನಗೆ ನಿಜಜೀವನದಲ್ಲಿ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆಯಿತ್ತು. ನಿರ್ದೇಶಕರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಎಂದ ತಕ್ಷಣ ಒಪ್ಪಿಕೊಂಡೆ. ಈ ಚಿತ್ರದಲ್ಲಿ ನಾನು ಸಾಹಸ ದೃಶ್ಯಗಳಲ್ಲಿ ಅಭಿನಯಿಸಿದ್ದೇನೆ. ಸಾಹಸ ದೃಶ್ಯ ಹೇಳಿಕೊಟ್ಟ ಸಾಹಸ ನಿರ್ದೇಶಕ ರವಿವರ್ಮ ಅವರಿಗೆ ಧನ್ಯವಾದ ಎಂದರು ನಾಯಕಿ ಅದಿತಿ ಪ್ರಭುದೇವ.

ನಮ್ಮದು ಮರ್ಡರ್ ಮಿಸ್ಟರಿ ಕಥೆ ಎನ್ನಬಹುದು. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಎನ್ನಬಹುದು. ಈ ಹಿಂದೆ ಕನ್ನಡದಲ್ಲಿ ಮರ್ಡರ್ ಮಿಸ್ಟರಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಸಾಕಷ್ಟು ಬಂದಿವೆಯಾದರೂ ನಮ್ಮ ಚಿತ್ರದ ಕಥೆ ಸ್ವಲ್ಪ ವಿಭಿನ್ನವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ವರ್ಷದ ಕೊನೆಗೆ ಬಿಡುಗಡೆಯಾಗುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಾಯಕ ಪವನ್ ತೇಜ್.

ಚಿತ್ರದಲ್ಲಿ ನಟಿಸಿರುವ ನಾಗಾರ್ಜುನ, ಛಾಯಾಗ್ರಾಹಕ ಸತೀಶ್ ಚಂದ್ರ ಹಾಗೂ ಸಂಕಲನಕಾರ ಉಮೇಶ್ ಆರ್ ಬಿ ಅವರು ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು “ಅಲೆಕ್ಸಾ” ಚಿತ್ರದ ಕುರಿತು ಮಾತನಾಡಿದರು.

ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ಟ್ರೇಲರ್ ಹಾಗೂ ಹಾಡುಗಳು ಜನರ ಮನ ಗೆಲುತ್ತಿದೆ. ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ‌. ಡಿಸೆಂಬರ್ 29 ರಂದು ಬಹು ನಿರೀಕ್ಷಿತ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.