Breaking News

ತಿಥಿ,ವಾರ.ನಕ್ಷತ್ರ ನೋಡದೆ ಮದುವೆಯಾದರೆ ವೈವಾಹಿಕ ಜೀವನ ಮುರಿದು ಬೀಳುತ್ತಾ..?

ಶುಭ ಕಾರ್ಯಗಳಿಗೆ ಪಂಚಾಂಗ ನೋಡುವುದರ ಹಿನ್ನಲೆ ಏನು....

SHARE......LIKE......COMMENT......

ಶುಭ ಕಾರ್ಯಗಳಿಗೆ ಪಂಚಾಂಗ ನೋಡುವುದರ ಹಿನ್ನಲೆ ಏನು?

ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎ೦ಬ ಐದು ಅಂಶಗಳಿಗೆ ಪಂಚಾಂಗವೆಂದು ಹೇಳಲಾಗಿದೆ. ಇವು ದಿನದಿನವೂ ಬದಲಾಗುತ್ತದೆ. ಮಾಸ, ಪಕ್ಷ, ಋತುಗಳು ಬದಲಾಗುವವಾದರೂ ಪ್ರತಿ ದಿನವೂ ಬದಲಾಗುವುದಿಲ್ಲ. ಆದರೆ ಇಂದಿನ ತಿಥಿ, ವಾರಗಳು ನಾಳೆ ಇರುವುದಿಲ್ಲ. ನಕ್ಷತ್ರ, ಯೋಗ, ಕರಣಗಳೂ ಹಾಗೆಯೇ. ಹೀಗೆ ಪ್ರತಿದಿನವೂ ವ್ಯತ್ಯಾಸವಾಗುವ ಈ ಐದು ಅಂಗಗಳೇ ಪಂಚಾಂಗಗಳು.

ತಿಥಿ, ವಾರಾದಿಗಳ ಜೊತೆಗೆ ಸಂವತ್ಸರ, ಆಯನ, ಮಾಸಾದಿಗಳು, ಮಾಸದಲ್ಲಿ ಗತಿಸಿದ ದಿನಗಳು, ಗ್ರಹಣ, ಮೌಢ್ಯಾದಿಗಳು, ಇವುಗಳಲ್ಲದೆ ಜಾತಕ ಮುಹೂರ್ತಗಳಿಗೆ ಉಪಯುಕ್ತಗಳಾದ ಗ್ರಹಗಳ ಸ್ಥಿತಿಗಳು, ವಿಷ, ಅಮೃತ ಘಳಿಗೆಗಳು, ಇನ್ನಿತರ ಧಾರ್ಮಿಕ ಪರ್ವದಿನಗಳೂ ಬರೆದಿರುತ್ತದೆ. ಇವುಗಳ ಜೊತೆಗೆ ಈ ಪಂಚ ಅಂಗಗಳನ್ನು ಅವುಗಳ ಆದ್ಯಕ್ಷರವನ್ನು ಬರೆಯುವುದರ ಮೂಲಕ ಸಂಕ್ಷಿಪ್ತವಾಗಿ ಬರೆಯಲಾಗುತ್ತದೆ.

ತಿಥಿ:

ದಿನವೊಂದಕ್ಕೆ ಅರುವತ್ತು ಘಳಿಗೆಗಳು (ಒಂದು ಘಳಿಗೆ – 24 ನಿಮಿಷ) ಆದರೆ ಎಲ್ಲಾ ತಿಥಿಗಳು ಅರುವತ್ತು ಘಳಿಗೆಗಳಿರುವುದಿಲ್ಲ. ಕೆಲವು ಕಡಿಮೆಯಿರುತ್ತದೆ. ಕೆಲವು ಜಾಸ್ತಿಯಿರುತ್ತದೆ. ಅರುವತ್ತು ಘಳಿಗೆಗಳಿಗಿಂತ ಕಡಿಮೆಯಿರುವ ತಿಥಿಗಳು ಜೊತೆಯಾಗಿ ಬಂದಾಗ ಒಂದು ತಿಥಿಯ ಮೇಲೆ (ಉಪರಿ) ಒಂದು ತಿಥಿ ಬರುತ್ತದೆ. ಅಂದರೆ ಐದು ದಿನಗಳಲ್ಲೇ ಆರು ತಿಥಿಗಳು ಮುಗಿಯುತ್ತವೆ. ಮತ್ತೆ ಕೆಲವೊಮ್ಮೆ ಅರುವತ್ತು ಘಳಿಗೆಗಿಂತ ಜಾಸ್ತಿಯಿರುವ ತಿಥಿಗಳು ಅವಿಚ್ಛಿನ್ನವಾಗಿ ಬಂದಾಗ ಒಂದೇ ತಿಥಿಯು ಎರಡು ದಿನ ಬರುತ್ತದೆ. ಹೀಗಾಗಿ ಕೆಲವೊಮ್ಮೆ ಎರಡು ಪಾಡ್ಯವೋ ಎರಡು ಏಕಾದಶಿಯೋ ಬರುವುದನ್ನು ಕಾಣಬಹುದಾಗಿದೆ. ಸೂರ್ಯೋದಯಕಾಲದಲ್ಲಿ ಯಾವ ತಿಥಿಯಿರುವುದೋ ಅದನ್ನು ಅಂದಿನ ತಿಥಿಯೆಂದು ವ್ಯವಹರಿಸಬೇಕು. ಸೂರ್ಯೋದಯದ ನಂತರ ತಿಥಿ ಎಷ್ಟು ಘಳಿಗೆಯಿರುತ್ತದೆಯೆಂದು ಪಂಚಾಂಗದಲ್ಲಿ ಬರೆದಿರುತ್ತದೆ.

ಉದಾಹರಣೆಗೆ:

ದಶಮೀ 3-15 ಎಂದು ಬರೆದಿದ್ದರೆ ಸೂರ್ಯೋದಯದ ನಂತರ ಮೂರು ಘಳಿಗೆ ಹದಿನೈದು ವಿಘಳಿಗೆಗಳಷ್ಟು ಕಾಲ ದಶಮಿಯಿದೆ ಎಂದರ್ಥ. (ಒಂದು ಘಳಿಗೆಗೆ 60 ವಿಘಳಿಗೆಗಳು) ಅಂದರೆ ಬೆಳಿಗ್ಗೆ ೬ ಘಂಟೆಗೆ ಸೂರ್ಯೋದಯವಾದರೆ ಆಮೇಲೆ ಸುಮಾರು ಏಳೂವರೆಯವರೆಗೆ ದಶಮಿಯಿದ್ದು ಆಮೇಲೆ ಪೂರ್ತಿ ಏಕಾದಶಿಯಿರುತ್ತದೆ. ಆದರೆ ಸೂರ್ಯೋದಯ ಕಾಲದಲ್ಲಿರುವ ದಶಮಿಯೇ ಅಂದಿನ ದಿನಪೂರ್ತಿ ತಿಥಿಯೆಂದು ವ್ಯವಹರಿಸಬೇಕು. ಅದಕ್ಕಾಗಿಯೇ ಸಂಕಲ್ಪದಲ್ಲಿ “ವ್ಯಾವಹಾರಿಕೇ” ಎಂದು ಹೇಳುವುದುಂಟು. ಪ್ರತಿಯೊಂದು ತಿಥಿಗೂ ಅಭಿಮಾನಿ ದೇವತೆಗಳಿದ್ದಾರೆ. ಆಯಾಯ ತಿಥಿಗಳಿಗೆ ಸಂಬಂಧಪಟ್ಟ ದೋಷಗಳ ನಿವಾರಣೆಗಾಗಿ ತಿಥ್ಯಭಿಮಾನಿ ದೇವತೆಗಳ ಆರಾಧನೆಯನ್ನು ಜೊತಿಃಶಾಸ್ತ್ರಜ್ಞರು ಹೇಳುತ್ತಾರೆ.

ನಕ್ಷತ್ರದ ಮಹತ್ವ:

ದಕ್ಷಪ್ರಜಾಪತಿಗೆ ಅರವತ್ತು ಹೆಣ್ಣುಮಕ್ಕಳು. ಅವರಲ್ಲಿ ಇಪ್ಪತ್ತೇಳು ಮಕ್ಕಳನ್ನು ಕೊಟ್ಟು ಮದುವೆ ಮಾಡಿದ. ಚಂದ್ರನ ಹೆಂಡಂದಿರೇ ಇಪ್ಪತ್ತೇಳು ನಕ್ಷತ್ರಗಳು. ಆಶ್ಚರ್ಯವೆಂದರೆ ಈ ನಕ್ಷತ್ರಗಳನ್ನು  ಹೇಳುವ ಎಲ್ಲ ಶಬ್ದಗಳು ಸ್ತ್ರೀಲಿಂಗಗಳಲ್ಲ. ಶ್ರವಣ ಮೂಲ ಶಬ್ದಗಳು ನಪುಂಸಕಲಿಂಗವಾದರೆ ಪುಷ್ಯ, ಹಸ್ತ ಶಬ್ದಗಳು ಪುಲ್ಲಿಂಗದವು. ಚಂದ್ರ ಪ್ರತಿದಿನವೂ ನಕ್ಷತ್ರದಿಂದ ನಕ್ಷತ್ರಕ್ಕೆ ಸಂಚರಿಸುತ್ತಾನೆ. ಹೆಚ್ಚುಕಡಿಮೆ ಒಂದು ದಿನಕಾಲ ನಕ್ಷತ್ರವೊಂದರಲ್ಲಿ ಇರುತ್ತಾನೆ. ಚಂದ್ರನಿರುವ ನಕ್ಷತ್ರವನ್ನು ನಿತ್ಯನಕ್ಷತ್ರವೆನ್ನುತ್ತೇವೆ. ಸೂರ್ಯನು ಒಂದು ನಕ್ಷತ್ರದಲ್ಲಿ ಸುಮಾರು ಹದಿಮೂರು ದಿನಗಳಿರುತ್ತಾನೆ. ಸೂರ್ಯನಿರುವ ನಕ್ಷತ್ರವನ್ನು “ಮಹಾನಕ್ಷತ್ರ”ವೆನ್ನುತ್ತೇವೆ.

ಉದಾಹರಣೆಗೆ:

“ಅಶ್ವಿನಿ-15” ಎಂದು ಬರೆದಿದ್ದರೆ ಸೂರ್ಯೋದಯದಿಂದ ಹದಿನೈದು ಘಳಿಗೆಗಳ ಕಾಲ (6 ಘಂಟೆ) ಅಶ್ವಿನೀ ನಕ್ಷತ್ರ ಇದೆ ಎಂದರ್ಥ. ಈ ಕೋಷ್ಟಕದಲ್ಲಿ ನಕ್ಷತ್ರಗಳಿಗೆ ಸಂಬಂಧಿಸಿದ ರಾಶಿ ಮತ್ತು ಅಧಿಪತಿಗಳ ಬಗ್ಗೆ ಮಾಹಿತಿ ಇದೆ.

ಯೋಗದ ಘಳಿಗೆ:

ಯೋಗವೆಂಬ ಶಬ್ದಕ್ಕೆ ಕೋಶದಲ್ಲಿ ಇಪ್ಪತ್ತೈದಕ್ಕಿಂತಲೂ ಹೆಚ್ಚು ಅರ್ಥವಿದೆ. ಪಂಚಾಂಗದಲ್ಲಿ ಯೋಗವೆಂಬ ಶಬ್ದವು ರೂಢನಾಮವಾಗಿ ವಿಷ್ಕಂಭಾದಿ ಇಪ್ಪತ್ತೇಳು ಯೋಗಗಳನ್ನು ಹೇಳುತ್ತದೆ. ನಕ್ಷತ್ರದಂತೆ ಯೋಗವೂ ಸಮಾನ್ಯವಗಿ ೬೦ ಘಳಿಗೆ ಇರುವುದರಿಂದ ಪ್ರತಿದಿನವೂ ಬದಲಾಗುತ್ತದೆ. ಪಂಚಾಂಗದಲ್ಲಿ ಯೋಗವನ್ನು ಸಂಕ್ಷಿಪ್ತಾಕ್ಷರದಲ್ಲಿ ಸೂಚಿಸಿ ಅದರ ಮುಂದೆ ಉದಯಾನಂತರ ಯೋಗದ ಅವಧಿಯನ್ನು ಘಳಿಗೆಗಳಲ್ಲಿ ಸೂಚಿಸಿರುತ್ತಾರೆ.

ಕರಣ:

ಬವ, ಬಾಲವ ಮೊದಲಾದ ಕರಣಗಳು ಹದಿನೆಂಟು. ಇದರಲ್ಲಿ ಮೊದಲ ಏಳು ಕರಣಗಳನ್ನುಸ್ಥಿರಕರಣಗಳೆಂದೂ ಕೊನೆಯ ನಾಲ್ಕು ಕರಣಗಳನ್ನು ಚರಕರಣಗಳೆಂದೂ ಜ್ಯೋತಿಶ್ಶಾಸ್ತ್ರವು ಪರಿಗಣಿಸಿದೆ. ಒಂದು ತಿಥಿಗೆ ಎರಡು ಕರಣಗಳು. ಒಂದು ತಿಥಿಯ ಪೂರ್ಣಕಾಲ ಅವತ್ತು ಘಳಿಗೆಗಳಿದ್ದರೆ 30 ಘಳಿಗೆಯನ್ನು ಹಂಚಿಕೊಂಡು 2 ಕರಣಗಳಿರುತ್ತವೆ ಹಾಗಾಗಿ ಎಲ್ಲಾ ಶುಭ ಸಮರಂಭಗಳಿಗೆ ಪಂಚಾಂಗ ನೋಡುವುದು ಬಹಳ ಮುಖ್ಯ .ಯಾವ ಗ್ರಹಗತಿಗಳು ಯಾವ ದಿಕ್ಕಿನಲ್ಲಿ ಸಂಚರಿಸುತ್ತೆ ಎಂದು ನಿಖರವಾಗಿ ತಿಳಿದು ಬರುತ್ತದೆ. ಪಂಚಾಂಗ, ತಿಥಿ,ವಾರ ನಕ್ಷತ್ರ ನೋಡಿ ಮುಹೂರ್ತ ಇಡುವುದು ಒಳಿತು.