Breaking News

ರೆಡಿಯಾಯ್ತು ಪ್ರೈವೇಟ್ ಸ್ಕೂಲ್ ಗೆ ಪೈಪೋಟಿ..!

ಸರ್ಕಾರಿ ಶಾಲೆ ಮಕ್ಕಳ ದಿನಚರಿ ಬದಲು.....

SHARE......LIKE......COMMENT......

ರಾಯಚೂರು: 

ಖಾಸಗಿ ಶಾಲೆಗಳಿಂದ ಪೈಪೋಟಿ ಎದುರಿಸುತ್ತಿರುವ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೆ ಸರ್ಕಾರ ಮತ್ತೂಂದು ಯೋಜನೆ ಪರಿಚಯಿಸಿದೆ. 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಡೈರಿ ವಿತರಿಸಲು ಮುಂದಾಗುವ ಮೂಲಕ ಕಲಿಕಾ ಪ್ರಗತಿಗೆ ಶ್ರಮಿಸುತ್ತಿದೆ. ಈಗಾಗಲೇ ಆಯಾ ಜಿಲ್ಲೆಗಳಿಗೆ ಡೈರಿಗಳನ್ನು ಸರಬರಾಜು ಮಾಡಿದ್ದು, ಇನ್ನೇನು ವಿದ್ಯಾರ್ಥಿಗಳಿಗೆ ವಿತರಿಸಬೇಕಿದೆ.

ಖಾಸಗಿ ಶಾಲೆಗಳಲ್ಲಿ ಇಂಥ ಪದ್ಧಯಿತ್ತು. ಈಗ ಅದನ್ನು ಸರ್ಕಾರಿ ಶಾಲೆಗಳು ಅನುಸರಿಸುತ್ತಿವೆ. ಇದೊಂದು ಆಲ್‌ ಇನ್‌ ಒನ್‌(ALL IN ONE) ಎನ್ನುವ ರೀತಿಯ ಡೈರಿಯಾಗಿದ್ದು, ಮಕ್ಕಳ ಜ್ಞಾನಾರ್ಜನೆಗೆ ಪೂರಕವಾದ ಡೈರಿ ಎನ್ನುತ್ತಾರೆ ಅಧಿಕಾರಿಗಳು.

ವಿದ್ಯಾರ್ಥಿ ವಿವರದ ಜತೆಗೆ ಸಮಗ್ರ ಮಾಹಿತಿ ಒಳಗೊಂಡ 152 ಪುಟಗಳ ಡೈರಿ ಇದಾಗಿದೆ. ಮೊದಲ ಪುಟದಲ್ಲಿ ಶಾಲಾ ವೇಳಾಪಟ್ಟಿ, ವಿದ್ಯಾರ್ಥಿ ಹೆಸರು, ತಂದೆ ಹೆಸರು, ವಿದ್ಯಾರ್ಥಿ ವಿಳಾಸ, ರಕ್ತದ ಗುಂಪು, ಜಾತಿ, ಆಧಾರ್‌ ಸಂಖ್ಯೆ ಇರಲಿದೆ. ಡೈರಿ ನೋಡಿದರೆ ಆ ವಿದ್ಯಾರ್ಥಿಯ ಸಂಪೂರ್ಣ ವಿಳಾಸ ಗೊತ್ತಾಗುತ್ತದೆ. ಅದರ ಜತೆಗೆ ಶೈಕ್ಷಣಿಕ ವರ್ಷದಲ್ಲಿ ಕೈಗೊಂಡ ಚಟುವಟಿಕೆಗಳ ವಿವರ, ಆಯಾ ತಿಂಗಳಲ್ಲಿ ಬರುವ ಸರ್ಕಾರಿ ಆಚರಣೆಗಳು, ಜಯಂತಿಗಳ ವಿವರ ಇರಲಿದೆ.

ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳೇನು, ಶಾಲೆ ಶಿಕ್ಷಕರ ಮಾಹಿತಿ, ಜತೆ ಅವರ ದೂರವಾಣಿ ಸಂಖ್ಯೆಗಳು ಉಲ್ಲೇಖವಾಗಿರುತ್ತದೆ. ಪರೀಕ್ಷಾ ವೇಳಾಪಟ್ಟಿ, ಪ್ರಾಜೆಕ್ಟ್ಗಳ ವಿವರಣೆ ಕೂಡ ಇರುತ್ತದೆ.

ಇಷ್ಟು ದಿನ ಪಾಲಕರಿಗೆ ಯಾವುದಾದರೂ ಮಾಹಿತಿ ನೀಡಬೇಕಾದರೆ ದೂರವಾಣಿ ಕರೆ ಮಾಡಿ ತಿಳಿಸಬೇಕಿತ್ತು. ಆದರೆ, ಇನ್ನು ಮುಂದೆ ಸೂಚನೆಗಳನ್ನು ಈ ಡೈರಿಯಲ್ಲೇ ಬರೆದು ಕಳುಹಿಸಲಾಗುತ್ತದೆ. ಅದಕ್ಕೆ ಪಾಲಕರು ಉತ್ತರವನ್ನು ಕೂಡ ಡೈರಿಯಲ್ಲಿಯೇ ನೀಡಲು ಕಾಲಂ ನೀಡಲಾಗಿದೆ. ಮಗು ಶಾಲೆಗೆ ಗೈರಾದರೆ ಪಾಲಕರಿಂದ ಕಾರಣ ಉಲ್ಲೇಖೀಸಿ ಸಹಿ ಮಾಡಿ ಕಳುಹಿಸಬೇಕು. ಜ್ಞಾನಾರ್ಜನೆ ಆಗುವಂಥ ಅನೇಕ ವಿಚಾರಗಳಿವೆ. ಶಿಕ್ಷಣಕ್ಕೆ ಸಂಬಂಧಿಸಿದ ಹಲವು ನಾಣ್ಣುಡಿಗಳು, ಆರೋಗ್ಯ ಇಲಾಖೆ ಮಾತ್ರೆಗಳ ವಿವರ ಸೇರಿ ಸಾಕಷ್ಟು ವಿಚಾರಗಳಿವೆ.

ಅದರ ಜತೆಗೆ ನನ್ನ ಮೇಲೆ ಪ್ರಭಾವ ಬೀರಿದ ವ್ಯಕ್ತಿ ಎಂಬ ಅಂಕಣವಿದ್ದು, ಅದನ್ನು ವಿದ್ಯಾರ್ಥಿಗಳೇ ಭರ್ತಿ ಮಾಡಬೇಕಿದೆ. ಪ್ರತಿ ಹಳ್ಳಿಯಲ್ಲೂ ಖಾಸಗಿ ಶಾಲೆ ಹುಟ್ಟಿಕೊಂಡಿದ್ದು, ಸರ್ಕಾರಿ ಶಾಲೆಗಳ ಅಸ್ತಿತ್ವಕ್ಕೆ ಕುತ್ತು ತರುತ್ತಿದೆ. ಇಂಥ ವೇಳೆ ಖಾಸಗಿ ಶಾಲೆಗಳಿಗೆ ಎಲ್ಲ ವಿಧದಲ್ಲೂ ಪೈಪೋಟಿ ನೀಡುವ ಅನಿವಾರ್ಯತೆ ಮನಗಂಡ ಸರ್ಕಾರ ಖಾಸಗಿ ಶಾಲೆಗಳಲ್ಲಿ ಚಾಲ್ತಿಯಲ್ಲಿದ್ದ ಡೈರಿ ಪದ್ಧತಿಯನ್ನ ಪರಿಚಯಿಸುತ್ತಿದೆ.