ಅಮೇರಿಕಾ/ಇರಾನ್:
2 ರಾಷ್ಟ್ರಗಳ ನಡುವಿನ ಗುದ್ದಾಟ ಹಲವು ರಾಷ್ಟ್ರಗಳ ಮೇಲೆ ಪರಿಣಾಮ ಬೀರಲಿದ್ದು, ಮುಖ್ಯವಾಗಿ ಭಾರತದ ವಾಣಿಜ್ಯ ವಹಿವಾಟು, ತೈಲ ಪೂರೈಕೆಯ ಮೇಲೆ ಹೊಡೆತ ಬೀಳಲಿದೆಯೇ ಎಂಬ ಜಿಜ್ಞಾಸೆ ಆರಂಭವಾಗಿದೆ. ಒಂದೆಡೆ ಇರಾನ್ ಜತೆಗಿನ ವಹಿವಾಟು ನಿಲ್ಲಿಸುವಂತೆ ಅಮೆರಿಕ ಭಾರತದ ಮೇಲೆ ಒತ್ತಡ ಹೇರುತ್ತಿದ್ದರೆ, ಮತ್ತೊಂದೆಡೆ ಭಾರತ ತನ್ನ ಹಿತವನ್ನು ಪರಿಗಣಿಸಿ ಇರಾನ್ನಿಂದ ತೈಲ ಆಮದನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದೆ.
2015ರಲ್ಲಿ ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದ್ದ ಅಮೆರಿಕ, ಅದು ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ’ ಎಂದು ಆರೋಪಿಸಿ ಈ ವರ್ಷದ ಆರಂಭದಲ್ಲಿ ಮತ್ತೆ ನಿರ್ಬಂಧ ವಿಧಿಸಿತು. ನಿರ್ಬಂಧದ ಮೊದಲ ಹಂತ ಈಗಾಗಲೇ ಜಾರಿಯಲ್ಲಿದ್ದು, ಅದು ನವೆಂಬರ್ 4ರಿಂದ ಪೂರ್ಣಪ್ರಮಾಣದಲ್ಲಿ ಜಾರಿಯಾಗಲಿದೆ.
ಈ ಅವಧಿಯಲ್ಲಿ ಭಾರತ ಸೇರಿದಂತೆ ಎಲ್ಲ ದೇಶಗಳೂ ಇರಾನ್ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣ ಸ್ಥಗಿತಗೊಳಿಸಲಿವೆ ಎಂದು ಅಮೆರಿಕ ನಿರೀಕ್ಷಿಸಿದೆ. ಆದರೆ ಭಾರತ ಮಾತ್ರ ಇರಾನ್ನಿಂದ ತೈಲ ಆಮದು ಮುಂದುವರಿಸಲು ನಿರ್ಧರಿಸಿದೆ. ಇರಾನ್ ಜತೆ ಯಾವುದೇ ರೀತಿಯ ವ್ಯವಹಾರ ಮುಂದುವರಿಸುವ ದೇಶವು ತನ್ನ ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆಯೊಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗುವುದು ಎಂದು ಅಮೆರಿಕ ಹೇಳಿರುವುದು, ಸಂಚಲನಕ್ಕೆ ಕಾರಣವಾಗಿದೆ.
ರಷ್ಯಾದಿಂದ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಹಾಗೂ ಇರಾನ್ನಿಂದ ತೈಲ ಆಮದು ಮಾಡಿಕೊಳ್ಳುವ ಭಾರತದ ನಿರ್ಧಾರವನ್ನು ‘ಗಂಭೀರವಾಗಿ ಪರಿಶೀಲನೆ’ ಮಾಡಲಾಗುತ್ತಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಟ್ರಂಪ್ ಆಡಳಿತಕ್ಕೆ ಭಾರತದೊಂದಿಗಿನ ಸ್ನೇಹಸಂಬಂಧವನ್ನು ಹದಗೆಡಿಸಿಕೊಳ್ಳುವ ಇಚ್ಛೆ ಇಲ್ಲ. ಆದರೆ, ಇರಾನ್ ವಿರುದ್ಧದ ಪ್ರತೀಕಾರಕ್ಕೆ ಅದು ಭಾರತದ ವಾಣಿಜ್ಯ ಹಿತಾಸಕ್ತಿಗಳಿಗೆ ಪೆಟ್ಟು ನೀಡಬಹುದೆ ಎಂಬ ಆತಂಕ ಕಾಡುತ್ತಿದೆ……