ಮದ್ದೂರು:
ತಾಲೂಕಿನ ಚನ್ನಸಂದ್ರ ಹಾಗೂ ಉಪ್ಪಿನಕೆರೆ ನಡುವಿನ ರಸ್ತೆ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಆರೋಪಿಸಿ ಕಾವೇರಿ ನೀರಾವರಿ ಇಲಾಖೆ ಕಚೇರಿ ಎದುರು ಗೊರವನಹಳ್ಳಿ ಹಾಗೂ ಚನ್ನಸಂದ್ರ ಗ್ರಾಮಸ್ಥರು ಪ್ರತಿಭಟನೆ ಮಾಡಿದರು.ಗುತ್ತಿಗೆದಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಗ್ರಾಪಂ ಅಧ್ಯಕ್ಷ ಯು.ಸಿ.ರವಿಗೌಡ ಮಾತನಾಡಿ, ಕಳೆದ ಎರಡೂವರೆ ತಿಂಗಳ ಹಿಂದೆ ಸಮೀಪದ ಚನ್ನಸಂದ್ರ ಗ್ರಾಮದಿಂದ ಉಪ್ಪಿನಕೆರೆ ಗ್ರಾಮ ಸಂಪರ್ಕಿಸುವ ರಸ್ತೆಯನ್ನು 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆದರೆ, ಕಳಪೆ ಕಾಮಗಾರಿಯಾದ ಕಾರಣ ಡಾಂಬರು ಎರಡೂವರೆ ತಿಂಗಳಲ್ಲೇ ಕಿತ್ತು ಹೋಗಿದೆ. ಹೀಗಾಗಿ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿ ಇಲಾಖೆ ಎಇಇ ನಾಯಕ್ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಕಳಪೆ ಕಾಮಗಾರಿ ಸಂಬಂಧ ತುರ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಹೀಗಾಗಿ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.ರೈತ ಮುಖಂಡರಾದ ಮಹೇಂದ್ರ, ರವಿ, ಶಿವು, ಸಂತೋಷ್, ಮರಂಕಯ್ಯ, ಶಿವಶೆಟ್ಟಿ, ಶಿವಕುಮಾರ್, ಬಸವರಾಜು, ಸುರೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು……