ಬೆಂಗಳೂರು:
ಮಾ.7ರಂದು ಆರ್ಎಂಸಿ ಯಾರ್ಡ್ ಸೋಪ್ ಕಾರ್ಖಾನೆ ಬಳಿಯ ರಸ್ತೆಯಲ್ಲಿ ನಡೆದ ರೌಡಿ ಲಕ್ಷ್ಮಣ್ (42) ಹತ್ಯೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ವರ್ಷಿಣಿ ಸೇರಿ 8 ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ ಪ್ರಮುಖ ಪಾತ್ರ ವಹಿಸಿರುವ ವರ್ಷಿಣಿಯನ್ನು ತನಿಖಾಧಿಕಾರಿಗಳು ತೀವ್ರ ವಿಚಾರಣೆ ನಡೆಸಿದಾಗ ಹಲವು ವಿಚಾರಗಳು ಬಹಿರಂಗವಾಗಿವೆ.
ಹೋಟೆಲ್ ರೂಮ್ ಬುಕ್ ಮಾಡಿ ಕಾಯುತ್ತಿದ್ದ ರೌಡಿ ಲಕ್ಷ್ಮಣ್ನನ್ನು ವಾಟ್ಸ್ಆಪ್ ಕಾಲ್ ಮಾಡಿ ವರ್ಷಿಣಿ ಹೊರಗೆ ಕರೆದು ಹಂತಕರಿಗೆ ಸಹಕರಿಸಿದ್ದಳು ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಪ್ರಮುಖ ಆರೋಪಿ ರೂಪೇಶ್ನಿಗೂ ಮೊದಲೇ ಲಕ್ಷ್ಮಣ್ನಿಗೆ ವರ್ಷಿಣಿ ಪರಿಚಯವಿತ್ತು. ಆ ನಂತರ ರೂಪೇಶ್ ಮೇಲೆ ಆಕೆಗೆ ಪ್ರೀತಿ ಬೆಳೆದಿತ್ತು. ವರ್ಷಿಣಿ ತಾಯಿ ವಿರೋಧಿಸಿ ರೂಪೇಶ್ಗೆ ಬುದ್ಧಿವಾದ ಹೇಳುವಂತೆ ಲಕ್ಷ್ಮಣ್ಗೆ ಹೇಳಿದ್ದಳು. ಅದಕ್ಕಾಗಿ ರೂಪೇಶ್ನನ್ನು ಕರೆದು ಲಕ್ಷ್ಮಣ್ ಬೆದರಿಕೆ ಹಾಕಿದ್ದ.
ಆದರೂ ಇವರಿಬ್ಬರು ಗುಟ್ಟಾಗಿ ಓಡಾಡುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಲಕ್ಷ್ಮಣ್, ಏರಿಯಾ ಬಿಟ್ಟು ದೂರ ಹೋಗುವಂತೆ ರೂಪೇಶ್ಗೆ ತಾಕೀತು ಮಾಡಿದ್ದ. ಇದರಿಂದ ಆಕ್ರೋಶಗೊಂಡಿದ್ದ ವರ್ಷಿಣಿ ಮತ್ತು ರೂಪೇಶ್ 4 ತಿಂಗಳ ಹಿಂದೆಯೇ ಲಕ್ಷ್ಮಣ್ಗೆ ಕೊಲೆಗೆ ಸಂಚು ರೂಪಿಸಿದ್ದರು. ಮಾ.7ರ ಬೆಳಗ್ಗೆ 9 ಗಂಟೆಗೆ ಲಕ್ಷ್ಮಣನಿಗೆ ವಾಟ್ಸ್ಆಪ್ನಲ್ಲಿ ಕರೆ ಮಾಡಿದ್ದ ವರ್ಷಿಣಿ, ನಾನು ನಿನ್ನನ್ನು ಭೇಟಿಯಾಗಲು ಲಂಡನ್ನಿಂದ ಬೆಂಗಳೂರಿಗೆ ಬರುತ್ತಿದ್ದೇನೆ. ಏಕಾಂತದಲ್ಲಿ ಮಾತನಾಡೋಣ ಎಂದು ಹೇಳಿದ್ದಳು.
ಲಕ್ಷ್ಮಣ, ಕೊಠಡಿ ಕಾಯ್ದಿರಿಸಿಕೊಂಡು ವರ್ಷಿಣಿಗೆ ಕಾಯುತ್ತಿದ್ದ. ಮಧ್ಯಾಹ್ನವಾದರೂ ಲಕ್ಷ್ಮಣ ಹೊರಗೆ ಬಾರದೆ ಇದ್ದಾಗ ರಸ್ತೆಯಲ್ಲೇ ಕಾಯುತ್ತಿದ್ದ ಆರೋಪಿಗಳು, ‘ರಾಯಲ್ ಟಯರ್ ಶಾಪ್’ ಅಂಗಡಿ ಫೋಟೋ ತೆಗೆದು ವರ್ಷಿಣಿಗೆ ರವಾನಿಸುತ್ತಾರೆ. ಆಕೆ ಲಕ್ಷ್ಮಣ್ ಮೊಬೈಲ್ ವಾಟ್ಸ್ಆಪ್ಗೆ ಮಾಡಿ ಇಲ್ಲೇ ಕಾಯುತ್ತಿದ್ದೇನೆ ಬೇಗ ಬಂದು ಕರೆದುಕೊಂಡು ಹೋಗುವಂತೆ ಹೇಳುತ್ತಾಳೆ. ಲಕ್ಷ್ಮಣ್ ಕಾರು ತೆಗೆದುಕೊಂಡು ಹೋಟೆಲ್ನಿಂದ ಹೊರಬಂದಾಗ ಮತ್ತೊಂದು ಕಾರಿನಲ್ಲಿ ಅಡ್ಡಗಟ್ಟಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಎಸಗಿದ್ದ:
ಕುಟುಂಬ ಸದಸ್ಯರಿಗೆ ಪರಿಚಯವಿದ್ದ ಲಕ್ಷ್ಮಣ್, ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡು ಬ್ಲಾ್ಯಕ್ವೆುೕಲ್ ಮಾಡುತ್ತಿದ್ದ. ಪದೇಪದೆ ಒಂಟಿಯಾಗಿ ಬರುವಂತೆ ಕರೆಯುತ್ತಿದ್ದ. ಇಲ್ಲವಾದರೆ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದ. ಇದನ್ನು ರೂಪೇಶ್ಗೆ ತಿಳಿಸಿ ಸಹಾಯ ಕೋರಿದ್ದೆ ಎಂದು ವರ್ಷಿಣಿ ಅಳಲು ತೋಡಿಕೊಂಡಿದ್ದಾಳೆ……