ಮುಂಡರಗಿ:
ಸಣ್ಣ ವ್ಯಾಪಾರ-ವಹಿವಾಟು ಸೇರಿ ಕೌಶಲಾಭಿವೃದ್ಧಿ ಯೋಜನೆಯಲ್ಲಿ ಹಲವು ಅವಕಾಶ ಮತ್ತು ಅನುಕೂಲಗಳಿವೆ. ಅಗತ್ಯವಿರುವ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಯುವಕರಿಗೆ ಅನುಕೂಲ ಕಲ್ಪಿಸಲಾಗುವುದು. ಹೊಸ ತಂತ್ರಜ್ಞಾನದ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಲಾಗುವುದು ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಬಹುತೇಕ ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಡಿ ನಿರುದ್ಯೋಗಿ ಯುವಕರಿಗೆ ವಿಶೇಷ ತರಬೇತಿ ಮತ್ತು ಆರ್ಥಿಕ ನೆರವು ನೀಡಲಾಗುತ್ತದೆ. ಯುವಕ-ಯುವತಿಯರು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಬರಡು ಭೂಮಿಯಲ್ಲಿ ನೀರಾವರಿ ಜಮೀನಿಗಿಂತಲೂ ಹೆಚ್ಚು ಆದಾಯ ಪಡೆದುಕೊಳ್ಳಬಹುದು. ಈ ಕುರಿತಂತೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಕೌಶಲ ಅಭಿವೃದ್ಧಿ ಯೋಜನೆಯಡಿ ಹಲವಾರು ಉತ್ತಮ ಮಾರ್ಗಗಳಿವೆ. ರೈತರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೇಂದ್ರ ಸರ್ಕಾರದಿಂದ ಹಲವಾರು ಕೌಶಲ ಆಧಾರಿತ ತಂತ್ರಜ್ಞಾನ ಲಭ್ಯವಿದೆ. ನಿರುದ್ಯೋಗಿ ಯುವಕರು ಹಾಗೂ ರೈತರು ಸೂಕ್ತ ಕೌಶಲ ಅಭಿವೃದ್ಧಿ ಜ್ಞಾನ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಲು ಸಾಕಷ್ಟು ಅವಕಾಶಗಳಿವೆ ಎಂದರು. ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಶಿಕ್ಷಣ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಮುಂದೆ ಏನು ಮಾಡಬೇಕು ಎನ್ನುವ ಗೊಂದಲ ಸೃಷ್ಟಿಯಾಗುತ್ತದೆ. ಅದನ್ನು ನಿವಾರಿಸುವ ಉದ್ದೇಶದಿಂದ ಕೌಶಲಾಭಿವೃದ್ಧಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ಹಾಗೂ ವ್ಯಕ್ತಿತ್ವ ವಿಕಸನದ ಮೂಲಕ ಅವರಿಗೆ ಮಾರ್ಗದರ್ಶನ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು……