Breaking News

ಆಪಾದಿತ ಸರ್ಕಾರಿ ನೌಕರರ ಮೇಲೆ ಕಣ್ಗಾವಲು..!

ಇಲಾಖಾ ವಿಚಾರಣೆ ಪ್ರಕರಣ ನಿರ್ವಹಣೆ ವ್ಯವಸ್ಥೆ....

SHARE......LIKE......COMMENT......

ಬೆಂಗಳೂರು:

ಅವ್ಯವಹಾರ,ಭ್ರಷ್ಟಾಚಾರ, ವೃತ್ತಿ ವೈಷಮ್ಯ ಇತ್ಯಾದಿ ಕಾರಣಕ್ಕೆ ಸರ್ಕಾರಿ ನೌಕರರ ಇಲಾಖೆ ವಿಚಾರಣೆ ಪ್ರಕರಣಗಳು ವರ್ಷಾನುಗಟ್ಟಲೆ ಮುಗಿಯದಿರುವುದು, ಕಡತಗಳ ನಾಪತ್ತೆ ತಡೆಯುವ ಉದ್ದೇಶದಿಂದ ಸರ್ಕಾರ ಮಹತ್ವದ ತೀರ್ಮಾನಕ್ಕೆ ಬಂದಿದೆ….

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ‘ಇಲಾಖಾ ವಿಚಾರಣೆ ಪ್ರಕರಣ ನಿರ್ವಹಣೆ ವ್ಯವಸ್ಥೆ’ ಎಂಬ ಹೊಸ ತಂತ್ರಾಂಶ ಸಿದ್ಧಪಡಿಸಿದ್ದು, ಪ್ರತಿ ಇಲಾಖೆ ವಿಚಾರಣೆ ಪ್ರಕರಣವನ್ನೂ ಆನ್​ಲೈನ್​ನಲ್ಲಿ ನಮೂದಿಸಿ ಕಣ್ಗಾವಲಿಡಲಿದೆ. ಇನ್ನುಮುಂದೆ ಪ್ರತಿ ಇಲಾಖೆ ವಿಚಾರಣೆ ಪ್ರಕರಣಗಳನ್ನು ಮತ್ತು ತನಿಖಾ ಹಂತಗಳನ್ನು ಈ ತಂತ್ರಾಂಶದಲ್ಲಿ ನಮೂದಿಸುವುದು ಕಡ್ಡಾಯ. ಇದರಿಂದ ಯಾವ ಪ್ರಕರಣ ಯಾವ ಹಂತದಲ್ಲಿದೆ, ತನಿಖೆ ಮಾಡಿದ್ದು ಯಾರು, ಪ್ರತಿಫಲವೇನು, ತುದಿ ಮುಟ್ಟಿತೇ? ಎಂಬುದನ್ನು ಅರಿಯುವುದಕ್ಕೆ ಸರ್ಕಾರದ ಮುಖ್ಯಕಾರ್ಯದರ್ಶಿ, ಇಲಾಖೆ ಮುಖ್ಯಸ್ಥರು ಮತ್ತು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ಸುಲಭವಾಗಲಿದೆ.

ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಮೇಲೆ ನಿತ್ಯ ಒಂದಿಲ್ಲೊಂದು ದೂರು ದಾಖಲಾಗುತ್ತಲೇ ಇರುತ್ತವೆ. ಭ್ರಷ್ಟಾಚಾರ, ಕಳಪೆ ಕಾಮಗಾರಿ, ಅವ್ಯವಹಾರ, ಕರ್ತವ್ಯ ಲೋಪ, ಬೇಜವಾಬ್ದಾರಿ, ಉದ್ದೇಶಪೂರ್ವಕ ಲೋಪ, ಸರ್ಕಾರಿ ಬೊಕ್ಕಸಕ್ಕೆ ನಷ್ಟ ಇತ್ಯಾದಿ. ಪ್ರಕರಣಗಳ ಸತ್ಯಾಸತ್ಯತೆ ಬೆಳಕಿಗೆ ತರುವ ಉದ್ದೇಶದಿಂದ ಸರ್ಕಾರ ಇಲಾಖೆ ಮಟ್ಟದ ತನಿಖೆಗೆ ಆದೇಶ ನೀಡುವುದು ಸಾಮಾನ್ಯ ಪ್ರಕ್ರಿಯೆ.

ರಾಜಕೀಯ ಪ್ರಭಾವದಿಂದ ವಿಚಾರಣೆ ತಡೆಯೊಡ್ಡುವ ಪ್ರಯತ್ನ, ತನಿಖೆ ನಡೆದು ಆರೋಪ ಸಾಬೀತಾದರೆ ದಂಡನೆಗೊಳಗಾಗದಂತೆ ಕಡತವನ್ನೇ ಧೂಳು ಹಿಡಿಸಲಾಗುತ್ತದೆ,ಕೆಲ ಪ್ರಕರಣಗಳಲ್ಲಿ ವೃತ್ತಿ ವೈಷಮ್ಯ ಕಾರಣಕ್ಕೆ ವಿಚಾರಣೆ ಪೂರ್ಣವಾಗದೆ ಕಳಂಕ ಜೀವಂತ ಇಡುವ ಪ್ರಯತ್ನವೂ ನಡೆಯುತ್ತವೆ. ಆದ್ದರಿಂದ ಎಲ್ಲ ಬೆಳವಣಿಗೆಯಿಂದ ವಿಚಾರಣೆ ಉದ್ದೇಶ ಸಾಫಲ್ಯ ಹೊಂದುವುದೇ ಇಲ್ಲ. ಈ ಹಿನ್ನೆಲೆಯಲ್ಲಿ ತಂತ್ರಾಂಶ ರೂಪಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳು ವಿವರಣೆ ನೀಡಿದ್ದಾರೆ……