ಕ್ಯಾಲಿಫೋರ್ನಿಯಾ:
ಕ್ಯಾಲಿಫೋರ್ನಿಯಾದ ರಾಷ್ಟ್ರೀಯ ಉದ್ಯಾನದಲ್ಲಿ ಭಾರತೀಯ ಮೂಲದ ದಂಪತಿ 800 ಅಡಿ ಪ್ರಪಾತದಿಂದ ಬಿದ್ದು ದುರಂತ ಅಂತ್ಯ ಕಂಡಿದ್ದಾರೆ.
ವಿಷ್ಣು ವಿಶ್ವನಾಥ್ (29) ಮತ್ತು ಮೀನಾಕ್ಷಿ ಮೂರ್ತಿ (30) ಎಂಬ ಜೋಡಿ ಯೂಸೆಮಿಟಿ ನ್ಯಾಷನಲ್ ಪಾರ್ಕ್ನ ಬೆಟ್ಟದ ತುತ್ತತುದಿಯಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದು, ಅವರನ್ನು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ದಂಪತಿ ಎಂದು ಗುರುತಿಸಲಾಗಿದೆ.
ಸಿಸ್ಕೊ ಸಂಸ್ಥೆಯಲ್ಲಿ ಸಿಸ್ಟಮ್ ಇಂಜಿನಿಯರ್ ಆಗಿ ಕೆಲಸ ಸಿಕ್ಕಮೇಲೆ ಮೃತ ದಂಪತಿ ನ್ಯೂಯಾರ್ಕ್ನಿಂದ ಅಮೆರಿಕಕ್ಕೆ ತೆರಳಿದ್ದರು ಎನ್ನಲಾಗಿದ್ದು, ಈ ದಂಪತಿಗೆ ವಿಶ್ವ ಸುತ್ತುವ ಕನಸಿತ್ತು ಎಂಬುದನ್ನು ಅವರೇ ‘Holidays and HappilyEverAfters’ ಎಂಬ ಬ್ಲಾಗ್ನಲ್ಲಿ ಬರೆದಿಕೊಂಡಿದ್ದಾರೆ.
ಬೆಟ್ಟದ ತುದಿಯಿಂದ ಕೆಳಗೆ ಬಿದ್ದ ಪುರುಷ ಹಾಗೂ ಮಹಿಳೆಯ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಅ.25ರಂದೇ ನ್ಯಾಷನಲ್ ಪಾರ್ಕ್ ಅಧಿಕೃತ ಹೇಳಿಕೆ ನೀಡಿತ್ತು. ಆದರೆ ಸೋಮವಾರ ಈ ಮೃತ ದಂಪತಿ ಭಾರತದ ಮೂಲದವರು ಎಂದು ತಿಳಿದು ಬಂದಿದೆ.
ದಂಪತಿ ಪ್ರಪಾತಕ್ಕೆ ಬಿದ್ದಿರುವುದರ ಕುರಿತು ನಮಗಿನ್ನೂ ಕಾರಣ ತಿಳಿದು ಬಂದಿಲ್ಲ. ಘಟನೆ ಹೇಗೆ ಸಂಭವಿಸಿತು ಎಂಬುದನ್ನು ಇನ್ನೂ ಅರ್ಥೈಸಿಕೊಳ್ಳುತ್ತಿದ್ದೇವೆ. ಸದ್ಯದ ಪರಿಸ್ಥಿತಿ ನೋಡಿದರೆ ಈ ಕುರಿತು ಸ್ಪಷ್ಟ ಮಾಹಿತಿ ಸಿಗುವುದಿಲ್ಲ ಎಂದೆನಿಸುತ್ತದೆ. ಆದರೆ ಇದೊಂದು ದುರಂತ ಅಂತ್ಯ ಎಂದು ನ್ಯಾಷನಲ್ ಪಾರ್ಕ್ನ ವಕ್ತಾರ ಜೇಮ್ ರಿಚರ್ಡ್ ತಿಳಿಸಿದ್ದಾರೆ.
ವೃತ್ತಿಯಲ್ಲಿ ಇಬ್ಬರೂ ಸಾಫ್ಟ್ವೇರ್ ಇಂಜಿನಿಯರ್ಗಳಾಗಿದ್ದರು ಹಾಗೂ ನಮ್ಮ ಕಾಲೇಜಿನಲ್ಲಿ 2006ರಿಂದ 2010ರವರೆಗೆ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದರು ಎಂದು ಚೆಂಗನ್ನೂರ್ ಎಂಜಿನಿಯರಿಂಗ್ ಕಾಲೇಜಿನ ಹೆಸರಿನ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದುಕೊಳ್ಳಲಾಗಿದೆ…..