Breaking News

ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಿಎಂಗೆ ಪತ್ರ..!

23 ಮೆಗಾ ಯೋಜನೆ ನಿಲ್ಲಿಸಿ ಎಂದು ಮನವಿ....

SHARE......LIKE......COMMENT......

ದಕ್ಷಿಣ ಕನ್ನಡ:

ಕೊಡಗಿನಲ್ಲಿ ಘಟಿಸಿದ ದುರಂತ ಹಿನ್ನೆಲೆಯಲ್ಲಿ ಸುಸ್ಥಿರ ಮತ್ತು ಸುಭದ್ರ ಕರ್ನಾಟಕ ನಿರ್ಮಾಣ ಹಾಗೂ ಪಶ್ಚಿಮ ಘಟ್ಟಗಳ ಸ್ಥಾನಿಕ, ಜಾಗತಿಕ ಮಹತ್ವ ಗಮನದಲ್ಲಿಟ್ಟು ಪರಿಸರ ಹೋರಾಟಗಾರರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎಂಟು ಪುಟಗಳ ಪತ್ರ ಬರೆದಿದ್ದಾರೆ.

ನಾಡಿನ ಚಿಂತಕರು, ಸಾಹಿತಿಗಳು, ಪರಿಸರವಾದಿಗಳು, ವಿದ್ಯಾರ್ಥಿಗಳು, ರೈತರು, ವಿಜ್ಞಾನಿಗಳು, ಜೀವವಿಜ್ಞಾನಿಗಳು, ನಿವೃತ್ತ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಸಮಾಜದ ವಿವಿಧ ವರ್ಗದ ಸುಮಾರು 140 ಮಂದಿಯಿಂದ ಅಭಿಪ್ರಾಯ ಸಂಗ್ರಹಿಸಿ ಬರೆದಿರುವ ಪತ್ರವನ್ನು ಅ.17ರಂದು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಇ-ಮೇಲ್ ಮಾಡಲಾಗಿದೆ.

ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳ್ಳಿ ಪತ್ರ ಸಿದ್ಧಪಡಿಸಿದ್ದು, ವಿದ್ಯುತ್ ನೀತಿ ವಿಶ್ಲೇಷಕ ಶಂಕರ್ ಶರ್ಮ, ಪಶ್ಚಿಮ ಘಟ್ಟ ರಕ್ಷಣಾ ವೇದಿಕೆಯ ಸಹದೇವ ಶಿವಪುರ, ಸಾಹಿತಿ ನಾ.ಡಿಸೋಜ, ಬೇಳೂರು ಸುದರ್ಶನ, ಶಾಸಕ ಸುರೇಶ್ ಕುಮಾರ್ ಸೇರಿದಂತೆ ಹಲವರ ಸಲಹೆ ಸೂಚನೆಗಳು ಪತ್ರದಲ್ಲಿವೆ.

ಇಂಟರ್ ಗವರ್ನಮೆಂಟಲ್ ಪ್ಯಾನೆಲ್ ಫಾರ್ ಕ್ಲೈಮೇಟ್ ಚೇಂಜ್  ಸಂಸ್ಥೆ ಅ.6ರಂದು ಬಿಡುಗಡೆ ಮಾಡಿರುವ ವರದಿ ಪ್ರಕಾರ 2030ರಿಂದ 2050ರ ವೇಳೆಗೆ ಜಾಗತಿಕ ತಾಪಮಾನ 1.5 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಏರಿಕೆಯಾಗುವ ಸಂಭವವಿದೆ. ಇದರಿಂದ ಹಲವು ರೀತಿಯ ನೈಸರ್ಗಿಕ ವಿಕೋಪ ಸಂಭವಿಸಬಹುದು. ಜಗತ್ತೇ ಇಂತಹ ವಿಷಮ ಪರಿಸ್ಥಿತಿಯಲ್ಲಿರುವಾಗ ನಮ್ಮ ಪಶ್ಚಿಮ ಘಟ್ಟಗಳಲ್ಲಿ 23 ಮೆಗಾ ಯೋಜನೆ ಜಾರಿಗೊಳಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮುಂದಾಗಿರುವುದು ನಿಜಕ್ಕೂ ದುರಂತ. ವಿವಿಧ ಯೋಜನೆಗಳಿಗಾಗಿ 21 ಲಕ್ಷ ಬೃಹತ್ ಮರಗಳು ಬಲಿಯಾಗಲಿದ್ದು, ಇಡೀ ಮನುಕುಲದ ವಿರೋಧಿ ಕೃತ್ಯವಾಗಿ ಈ ಯೋಜನೆಗಳು ತೋರುತ್ತಿವೆ.

ಪಶ್ಚಿಮಘಟ್ಟ ಜಗತ್ತಿನ ಆಸ್ತಿ ಕೊಡಗು ಮಾತ್ರವಲ್ಲದೆ, ದ.ಕ, ಉಡುಪಿ, ಚಿಕ್ಕಮಗಳೂರು, ಉ.ಕ., ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ ಪಶ್ಚಿಮ ಘಟ್ಟಗಳು ಇಡೀ ಜಗತ್ತಿನ ಅತ್ಯಂತ ಪ್ರಮುಖ ಜೈವಿಕ ತಾಣವಾಗಿದೆ. ಎಲ್ಲ ನದಿಗಳ ಮೂಲವೂ ಇದೇ ಪಶ್ಚಿಮ ಘಟ್ಟಗಳು. ಗುಡ್ಡಗಳಲ್ಲಿ ಇಂಗುವ ನೀರು ವರ್ಷಪೂರ್ತಿ ಬಯಲು ನಾಡಿಗೆ ನೀರುಣಿಸುವ ಮೂಲಗಳು. ಅಲ್ಲದೆ ಇಡೀ ದೇಶದ ಮಳೆ ಸ್ವರೂಪ ನಿಗದಿ ಮಾಡುವ ಮಹತ್ವದ ಕೆಲಸವನ್ನೂ ಈ ಮಳೆಕಾಡುಗಳು ಮಾಡುತ್ತವೆ.

ಜಗತ್ತಿನ ಆಸ್ತಿಯೂ ಆದ ಈ ಅತಿಸೂಕ್ಷ್ಮ ಘಟ್ಟಗಳನ್ನು ಉಳಿಸಿಕೊಳ್ಳುವುದರ ಜತೆಗೆ ಸ್ಥಳೀಯರ ಆಶೋತ್ತರಗಳನ್ನು ವಾಸ್ತವದ ನೆಲೆಯಲ್ಲಿ ಅರ್ಥ ಮಾಡಿಕೊಂಡು ಪೂರೈಸಬೇಕಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಪಶ್ಚಿಮ ಘಟ್ಟ ಯಾವ ರೀತಿ ಇರಬೇಕು ಎಂಬುದನ್ನು ಪತ್ರದಲ್ಲಿ ವಿವರಿಸಲಾಗಿದೆ. ಗಿಡ ನೆಡುವುದನ್ನು ಬಿಟ್ಟು ಇರುವ ಮರಗಳನ್ನು ಉಳಿಸಿಕೊಳ್ಳಬೇಕು. ಪಶ್ಚಿಮ ಘಟ್ಟದ ಕುದುರೆಮುಖ, ಆಗುಂಬೆಯಂತಹ ಕಾಡುಗಳು ಒಮ್ಮೆ ಅಳಿದು ಹೋದರೆ ಮತ್ತೆ ಮರುಸೃಷ್ಟಿ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳಿಗೆ ಇ-ಮೇಲ್ ಮೂಲಕ ಪತ್ರ ಕಳುಹಿಸಲಾಗಿದ್ದು, ವೈಯಕ್ತಿಕವಾಗಿ ಭೇಟಿಯಾಗಿ ಪತ್ರ ನೀಡುವ ಅವಕಾಶ ಇನ್ನೂ ಸಿಕ್ಕಿಲ್ಲ ಎಂದರು…..