Breaking News

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದ ಗುಜರಾತ್‌ ಟೈಟನ್ಸ್‌..!

ಸಂಜು ಸ್ಯಾಮ್ಸನ್‌ ನಾಯಕತ್ವದ ರಾಜಸ್ಥಾನ್‌ ಸೋಲಿಗೆ 3 ಕಾರಣಗಳು....

SHARE......LIKE......COMMENT......

ಕೋಲ್ಕತಾ:

15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿಯ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಸೋಲು ಅನುಭವಿಸಲು ಪ್ರಮುಖ ಮೂರು ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.

ಮಂಗಳವಾರ ಇಲ್ಲಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದಿದ್ದ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಗುಜರಾತ್‌ ಟೈಟನ್ಸ್‌ ತಂಡ 7 ವಿಕೆಟ್‌ಗಳಿಂದ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಪ್ರವೇಶ ಮಾಡಿತು.

ಮೊದಲು ಬ್ಯಾಟ್‌ ಮಾಡಿದ್ದ ರಾಜಸ್ಥಾನ್ ರಾಯಲ್ಸ್‌ ತಂಡ ಜೋಸ್‌ ಬಟ್ಲರ್‌(56 ಎಸೆತಗಳಲ್ಲಿ 89 ರನ್‌) ಬ್ಯಾಟಿಂಗ್‌ ಸಹಾಯದಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 188 ರನ್‌ ಕಲೆ ಹಾಕಿತ್ತು. ಆ ಮೂಲಕ ಗುಜರಾತ್‌ ಟೈಟನ್ಸ್‌ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತದ ಗುರಿ ನೀಡುವಲ್ಲಿ ರಾಜಸ್ಥಾನ್‌ ಯಶಸ್ವಿಯಾಯಿತು.

ಬಳಿಕ ಗುರಿ ಹಿಂಬಾಲಿಸಿದ ಗುಜರಾತ್‌ ಟೈಟನ್ಸ್ ತಂಡ ಒಂದು ಹಂತದಲ್ಲಿ 85 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ಡೇವಿಡ್‌ ಮಿಲ್ಲರ್‌ ಹಾಗೂ ಹಾರ್ದಿಕ್‌ ಪಾಂಡ್ಯ ಮುರಿಯದ ನಾಲ್ಕನೇ ವಿಕೆಟ್‌ಗೆ 106 ರನ್‌ ಜೊತೆಯಾಟವಾಡುವ ಮೂಲಕ ಇನ್ನೂ ಮೂರು ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಗುಜರಾತ್‌ ಪರ ಅತ್ಯುತ್ತಮ ಬ್ಯಾಟ್‌ ಮಾಡಿದ ಡೇವಿಡ್‌ ಮಿಲ್ಲರ್‌ ಕೇವಲ 38 ಎಸೆತಗಳಲ್ಲಿ ಅಜೇಯ 68 ರನ್ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇವರಿಗೆ ಮತ್ತೊಂದು ತುದಿಯಲ್ಲಿ ಅತ್ಯುತ್ತಮ ಸಾಥ್‌ ನೀಡಿದ್ದ ನಾಯಕ ಹಾರ್ದಿಕ್‌ ಪಾಂಡ್ಯ 27 ಎಸೆತಗಳಲ್ಲಿ ಅಜೇಯ 40 ರನ್‌ ಗಳಿಸಿದರು.

ಗುಜರಾತ್‌ ಟೈಟನ್ಸ್ ವಿರುದ್ಧ ರಾಜಸ್ಥಾನ್‌ ಸೋಲಿಗೆ ಪ್ರಮುಖ 3 ಕಾರಣಗಳು

1. ಬೌಲ್ಟ್‌ ತಂದು ಕೊಟ್ಟಿದ್ದ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಬೌಲರ್‌ಗಳು ವಿಫಲ

ಮೊದಲನೇ ಓವರ್‌ ಬೌಲ್‌ ಮಾಡಿದ ಟ್ರೆಂಟ್‌ ಬೌಲ್ಟ್‌ ಮಾರಕ ದಾಳಿ ನಡೆಸಿದ್ದರು. ಪ್ರಸಕ್ತ ಆವೃತ್ತಿಯಲ್ಲಿ ಹಲವು ಪರಿಣಾಮಕಾರಿ ಓವರ್‌ಗಳನ್ನು ಬೌಲ್‌ ಮಾಡಿರುವ ಟ್ರೆಂಟ್‌ ಬೌಲ್ಟ್‌ ಮಂಗಳವಾರದ ಪಂದ್ಯದಲ್ಲಿಯೂ ಅದೇ ಮುನ್ಸೂಚನೆ ನೀಡಿದ್ದರು. ಗುಜರಾತ್‌ ಇನಿಂಗ್ಸ್‌ನ ಮೊದಲನೇ ಓವರ್‌ ಎರಡನೇ ಎಸೆತದಲ್ಲಿ ವೃದ್ದಿಮಾನ್ ಸಹಾ ಅವರನ್ನು ಟ್ರೆಂಟ್‌ ಬೌಲ್ಟ್‌ ಔಟ್‌ ಮಾಡಿ(0-1) ಎದುರಾಳಿ ತಂಡಕ್ಕೆ ಆಘಾತ ನೀಡಿದ್ದರು. ಆದರೆ, ಮತ್ತೊಂದು ಬದಿಯಲ್ಲಿ ಪ್ರಸಿಧ್‌ ಕೃಷ್ಣ ಕಳೆದ ಪಂದ್ಯಗಳಂತೆ ಅಷ್ಟೊಂದು ಪರಿಣಾಮಕಾರಿಯಾಗಿ ಬೌಲ್‌ ಮಾಡಲಿಲ್ಲ.

ಮೊದಲನೇ ವಿಕೆಟ್‌ ಕಳೆದುಕೊಂಡ ಬಳಿಕ ಮ್ಯಾಥ್ಯೂ ವೇಡ್‌ ಹಾಗೂ ಶುಭಮನ್‌ ಗಿಲ್‌ ಅವರನ್ನು ನಿಯಂತ್ರಿಸುವಲ್ಲಿ ಆರ್‌ಆರ್‌ ಬೌಲರ್‌ಗಳು ವಿಫಲರಾದರು. ಈ ಜೋಡಿ ಎರಡನೇ ವಿಕೆಟ್‌ಗೆ 72 ರನ್‌ ಜೊತೆಯಾಟವಾಡುವ ಮೂಲಕ ಗುಜರಾತ್‌ ತಂಡವನ್ನು ಅಪಾಯದಿಂದ ಪಾರು ಮಾಡಿತ್ತು. ಇದು ರಾಜಸ್ಥಾನ್‌ ರಾಯಲ್ಸ್‌ ಹಿನ್ನಡೆಗೆ ಒಂದು ಕಾರಣ ಎಂದು ಹೇಳಬಹದು.

2. ಆರ್‌ ಅಶ್ವಿನ್‌-ಯುಜ್ವೇಂದ್ರ ಚಹಲ್ ವೈಫಲ್ಯ

ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿರುವ ಆರ್‌ ಅಶ್ವಿನ್‌ ಹಾಗೂ ಯುಜ್ವೇಂದ್ರ ಚಹಲ್‌ ಅವರು ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಿ ಕಾಣಲಿಲ್ಲ. ಮಧ್ಯಮ ಓವರ್‌ಗಳಲ್ಲಿ ಹಾರ್ದಿಕ್‌ ಪಾಂಡ್ಯ ಹಾಗೂ ಡೇವಿಡ್‌ ಮಿಲ್ಲರ್‌ ಜೋಡಿಯ ಜೊತೆಯಾಟವನ್ನು ಈ ಇಬ್ಬರಲ್ಲಿ ಒಬ್ಬರು ಮುರಿಯಬಹುದು ಎಂದು ಭಾವಿಸಲಾಗಿತ್ತು. ಆದರೆ, ಮಿಲ್ಲರ್‌-ಹಾರ್ದಿಕ್‌ ಮುಂದೆ ಇವರ ಸ್ಪಿನ್‌ ಮೋಡಿ ನಡೆಯಲಿಲ್ಲ.

ಪಂದ್ಯದಲ್ಲಿ ಇಬ್ಬನಿ ಇದ್ದಿದ್ದರಿಂದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಬೌಲರ್‌ಗಳಿಂದ ಸಾಧ್ಯವಾಗಿರಲಿಲ್ಲ. ಹಾಗಾಗಿ, ಆರ್‌ಆರ್‌ ಸ್ಪಿನ್‌ ಜೋಡಿಗೆ ಸ್ವಲ್ಪ ಹಿನ್ನಡೆಯಾಯಿತು ಎನ್ನಬಹುದು. ಈ ಇಬ್ಬರೂ 8 ಓವರ್‌ಗಳಿಗೆ 72 ರನ್‌ ಬಿಟ್ಟುಕೊಟ್ಟಿದ್ದರು. ಆದರೆ, ಈ ಜೋಡಿ ಪ್ರಸಕ್ತ ಟೂರ್ನಿಯಲ್ಲಿ ಒಟ್ಟು 37 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

3. ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ಸಂಜು ಸ್ಯಾಮ್ಸನ್‌ ವಿಫಲ

ಯಶಸ್ವಿ ಜೈಸ್ವಾಲ್‌ ವಿಕೆಟ್‌ ಒಪ್ಪಿಸಿದ ಬಳಿಕ ಎರಡನೇ ಓವರ್‌ನಲ್ಲಿ ಕ್ರಿಸ್‌ಗೆ ಬಂದ ಸಂಜು ಸ್ಯಾಮ್ಸನ್‌ ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್‌ಗೆ ಕೈ ಹಾಕಿದರು. ಆ ಮೂಲಕ ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸಿದ್ದರು. ಅಂದಹಾಗೆ ಅವರು ಆಡಿದ ಮೊಟ್ಟ ಮೊದಲ ಎಸೆತದಲ್ಲಿಯೇ ಸಿಕ್ಸರ್ ಸಿಡಿಸಿದ್ದರು. ನಂತರ ಮೊಹಮ್ಮದ್‌ ಶಮಿ ಹಾಗೂ ಅಲ್ಜಾರಿ ಜೋಸೆಫ್‌ ಅವರನ್ನು ದಂಡಿಸಿದ್ದರು. ಎದುರಿಸಿದ್ದ 26 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್‌ ಹಾಗೂ ಐದು ಬೌಂಡರಿಯೊಂದಿಗೆ 47 ರನ್‌ ಸಿಡಿಸಿದ್ದರು. ಆ ಮೂಲಕ ದೊಡ್ಡ ಇನಿಂಗ್ಸ್‌ ಆಡುವ ಭರವಸೆ ನೀಡಿದ್ದರು. ಆದರೆ, ಸಾಯಿ ಕಿಶೋರ್ ಸ್ಪಿನ್‌ ಮೋಡಿಗೆ ಶರಣಾದರು.

ಆ ಮೂಲಕ ಸಿಕ್ಕ ಅತ್ಯುತ್ತಮ ಆರಂಭವನ್ನು ಸಂಜು ಸ್ಯಾಮ್ಸನ್‌ ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ಒಂದು ವೇಳೆ ಸಂಜು ದೀರ್ಘಾವಧಿ ಕ್ರೀಸ್‌ನಲ್ಲಿ ಸಮಯವನ್ನು ಕಳೆದಿದ್ದರೆ ರಾಜಸ್ಥಾನ್‌ ರಾಯಲ್ಸ್‌ ಮೊತ್ತ 200ರ ಗಡಿ ದಾಟುತ್ತಿತ್ತು. ಇದರ ಹೊರತಾಗಿಯೂ ಜೋಸ್‌ ಬಟ್ಲರ್‌ ಅವರ 89 ರನ್ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ 188 ರನ್‌ ಕಲೆ ಹಾಕಿತ್ತು……