ಅಬುಧಾಬಿ:
ಉತ್ತಮ ನಿರ್ವಹಣೆ ನಡುವೆಯೂ ಗೆಲುವನ್ನು ಒಲಿಸಿಕೊಳ್ಳುವಲ್ಲಿ ವಿಪಲವಾಗುತ್ತಿರುವ ಪಂಚ ಕನ್ನಡಿಗರನ್ನು ಒಳಗೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-13ರ ತನ್ನ ನಾಲ್ಕನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಗುರುವಾರ ಎದುರಿಸಲಿದೆ. ಟೂರ್ನಿಯಲ್ಲಿ ಇದುವರೆಗೆ ಆಡಿರುವ ತಲಾ 3 ಪಂದ್ಯಗಳಲ್ಲಿ 2 ಸೋಲು, 1 ಗೆಲುವು ದಾಖಲಿಸಿರುವ ಉಭಯ ತಂಡಗಳು ಸಮಾನ ಸ್ಥಿತಿಯಲ್ಲಿವೆ. ಹಿಂದಿನ ಪಂದ್ಯಗಳಲ್ಲಿ ವೀರೋಚಿತ ನಿರ್ವಹಣೆಯ ನಡುವೆ ಸೋಲು ಕಂಡಿರುವ ಎರಡೂ ತಂಡಗಳು ಜಯದ ಹಾದಿಗೆ ಮರಳಲು ಪೈಪೋಟಿ ನಡೆಸಲಿವೆ.
ಕನ್ನಡಿಗರಾದ ನಾಯಕ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಭರ್ಜರಿ ಫಾರ್ಮ್ನಲ್ಲಿರುವುದು ತಂಡದ ಪ್ಲಸ್ ಪಾಯಿಂಟ್. ಆದರೆ, ಬೌಲಿಂಗ್ ವಿಭಾಗದಲ್ಲಿ ಮೊನಚಿನ ದಾಳಿ ಅಗತ್ಯವಿದೆ. ಮತ್ತೊಂದೆಡೆ, ಆರ್ಸಿಬಿ ನೀಡಿದ 202 ರನ್ಗಳ ಬೃಹತ್ ಮೊತ್ತ ಬೆನ್ನಟ್ಟಿ ಸಮಬಲ ಸಾಧಿಸಿದ್ದ ಮುಂಬೈ ತಂಡದ ಹೋರಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಸೂಪರ್ ಓವರ್ನಲ್ಲಿ ಆರ್ಸಿಬಿಗೆ ಶರಣಾಗಿದ್ದ ಮುಂಬೈ ಗೆಲುವಿನ ಹಳಿ ಏರುವ ಪ್ರಯತ್ನದಲ್ಲಿದೆ……
ಕಿಂಗ್ಸ್ ಇಲೆವೆನ್ ಪಂಜಾಬ್: ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ತಂಡಕ್ಕೆ ಬೌಲಿಂಗ್ ವಿಭಾಗ ದೊಡ್ಡ ಸಮಸ್ಯೆ ತಂದಿದೆ. ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ. ಜೇಮ್ಸ್ ನೀಶಾಮ್ ಬದಲಿಗೆ ಮುಜೀಬ್ ಉರ್ ರೆಹಮಾನ್ ಅವಕಾಶದ ನಿರೀಕ್ಷೆಯಲ್ಲಿದ್ದರೆ, ರಾಜಸ್ಥಾನ ವಿರುದ್ಧ ದುಬಾರಿಯಾಗಿದ್ದ ಎಂ.ಅಶ್ವಿನ್ ಬದಲಿಗೆ ಕನ್ನಡಿಗ ಕೆ.ಗೌತಮ್ ತಂಡಕ್ಕೆ ವಾಪಸಾಗುವ ಸಾಧ್ಯತೆಗಳಿವೆ.
ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ಎದುರು 4 ವಿಕೆಟ್ ಸೋಲು.
ಸಂಭಾವ್ಯ ತಂಡ: ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್ (ನಾಯಕ, ವಿಕೀ), ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್ವೆಲ್, ಕರುಣ್ ನಾಯರ್, ನೇಮ್ಸ್ ನೀಶಾಮ್/ಮುಜೀಬ್ ಉರ್ ರೆಹಮಾನ್, ರ್ಸ್ರಾಜ್ ಖಾನ್, ಎಂ.ಅಶ್ವಿನ್/ಕೆ.ಗೌತಮ್, ಮೊಹಮದ್ ಶಮಿ, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯಿ.
ಮುಂಬೈ ಇಂಡಿಯನ್ಸ್: ಸೋಲಿನ ನಡುವೆಯೂ ತಂಡದಲ್ಲಿ ಹೆಚ್ಚಿನ ಬದಲಾವಣೆ ಸಾಧ್ಯತೆ ಕಡಿಮೆ. ಮೊದಲ ಪಂದ್ಯದಲ್ಲಿ 2 ವಿಕೆಟ್ ಕಬಳಿಸಿದರೂ 2ನೇ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ದುಬಾರಿಯಾಗಿದ್ದ ಜೇಮ್ಸ್ ಪ್ಯಾಟಿನ್ಸನ್ ಬದಲಿಗೆ ಅನುಭವಿ ಮಿಚೆಲ್ ಮೆಕ್ಲೀನಘನ್ ಆಡಬಹುದು. ಇಶಾನ್ ಕಿಶನ್ ಆಡಿದ ಮೊದಲ ಪಂದ್ಯದಲ್ಲೇ ಮಿಂಚಿನ ನಿರ್ವಹಣೆ ತೋರಿದ್ದು, ಸೌರಭ್ ತಿವಾರಿಗೆ ಬೆಂಚು ಕಾಯುವುದು ಅನಿವಾರ್ಯ.
ಕಳೆದ ಪಂದ್ಯ: ಆರ್ಸಿಬಿ ಎದುರು ಸೂಪರ್ ಓವರ್ನಲ್ಲಿ ಸೋಲು.
ಸಂಭಾವ್ಯ ತಂಡ: ಕ್ವಿಂಟನ್ ಡಿ ಕಾಕ್ (ವಿಕೀ), ರೋಹಿತ್ ಶರ್ಮ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೈರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್/ಮಿಚೆಲ್ ಮೆಕ್ಲೀನಘನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ……