ಲೇಡಿಸ್ ಟೈಂ :
ಗೌಡ್ರು ಸ್ಪೆಷಲ್ ನಾಟಿಕೋಳಿ ಸಾರು ಯಾರಿಗೆ ಇಷ್ಟ ಇಲ್ಲ ಹೇಳಿ, ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರೂರುವುದು ಗ್ಯಾರೆಂಟಿ.. ನಾಟಿ ಕೋಳಿ ಸಾರು ತಿನ್ನೋಕೆ ಇಷ್ಟ ಆದ್ರೆ ಅಡುಗೆ ಮಾಡೋಕೆ ಕಷ್ಟ ಅನ್ನೋರಿಗೆಲ್ಲ ಇಲ್ಲಿದೆ ಸುಲಭವಾಗಿ ರುಚಿಕರವಾದ ನಾಟಿಕೋಳಿ ಸಾರು ಮಾಡುವ ರೆಸಿಪಿ.
ಸಾರಿಗೆ ಬೇಕಾಗುವ ಸಾಮಗ್ರಿಗಳು:
1 ಟೀ ಚಮಚ ಹುರಿಗಡಲೆ , 1 ಟೀ ಚಮಚ ಗಸೆಗಸೆ , 1 ಇಂಚು ಚಕ್ಕೆ , 5- 6 ಲವಂಗ , ಧನಿಯ ಪುಡಿ 2 ಟೇಬಲ್ ಚಮಚ , ಒಂದು ಈರುಳ್ಳಿ , 20 ಬೆಳ್ಳುಳ್ಳಿ ಎಸಳು , 1 ಇಂಚು ಶುಂಠಿ , 6 ಕೆಂಪು ಮೆಣಸಿನಕಾಯಿ , 1 ಟೀ ಚಮಚ ಮೆಣಸು , ಸ್ವಲ್ಪ ಕೊತ್ತಂಬರಿ ಸೊಪ್ಪು , ಅರ್ಧ ಹೋಳು ತೆಂಗಿನತುರಿ ಈ ಎಲ್ಲಾ ಪದಾರ್ಥಗಳನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದು, ನುಣ್ಣಗೆ ರುಬ್ಬಿಕೊಳ್ಳಿ.
ಸಾರು ತಯಾರಿಸುವ ವಿಧಾನ :
ಒಂದು ಕುಕರ್‌ಗೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಕಾದ ನಂತರ ಕಟ್ ಮಾಡಿಕೊಂಡಿರುವ ಈರುಳ್ಳಿ, ಟೊಮೆಟೊ, ಸ್ವಲ್ಪ ಮೆಂತ್ಯ ಸೊಪ್ಪು, ಹಾಕಿ ಚೆನ್ನಾಗಿ ಫ್ರೈ ಮಾಡಿ, ಈರುಳ್ಳಿ ಕಂದು ಬಣ್ಣ ಬಂದ ನಂತರ, ಚೆನ್ನಾಗಿ ತೊಳೆದ ನಾಟಿ ಕೋಳಿಯನ್ನುಹಾಕಿ. ಇದಾದ ಬಳಿಕ ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಅರಿಶಿನ ಪುಡಿ ಹಾಕಿ 5 ನಿಮಿಷ ಬಾಡಿಸಿ. ನಾಟಿ ಕೋಳಿ ನೀರು ಬಿಟ್ಟ ನಂತರ ಇದಕ್ಕೆ ರುಬ್ಬಿದ ಮಸಾಲೆ ಸೇರಿಸಿ ಹಸಿ ವಾಸನೆ ಹೋಗುವ ವರೆಗೂ ಹುರಿಯಿರಿ. ನಂತರ ನೀರು ಹಾಕಿ ಕುಕರ್ ಮುಚ್ಚಿ 5 ವಿಷಲ್ ಕೂಗಿಸಿ.ನಂತರ ಒಂದು ಕುದಿ ಕುದಿಸಿದರೆ ರುಚಿಕರವಾದ ಗೌಡ್ರು ಸ್ಪೆಷಲ್ ನಾಟಿಕೋಳಿ ಸಾರು ಮುದ್ದೆಯೊಂದಿಗೆ ಸವಿಯಲು ಸಿದ್ಧ……