Breaking News

ಕೆನಡಾದ ಸಂಸತ್‌ನಲ್ಲಿ ಮಾತೃಭಾಷೆಯಲ್ಲೇ ಮಾತನಾಡಿದ ಕನ್ನಡಿಗ..!

ಭಾಷಣದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌....

SHARE......LIKE......COMMENT......

ಕೆನಡಾ:

‘ನರಕಕ್ಕೆ ಇಳಿಸಿ.. ನಾಲಿಗೆ ಸೀಳ್ಸಿ.. ಬಾಯಿ ಹೊಲಿಸಿ ಹಾಕಿದ್ರೂನು.. ಮೂಗಿನಲ್ ಮಾತಾಡ್ತೀನ್ ಕನ್ನಡ ಪದವನ್’ ಹೀಗೆ ಹೇಳೋ ಮೂಲಕ ಜಿ.ಪಿ.ರಾಜರತ್ನಂ ಅವರು ಕನ್ನಡ ಭಾಷೆಯ ಪ್ರೀತಿಯನ್ನು ಸಾರಿದ್ದರು. ಇದೀಗ ದೂರದ ಕೆನಡಾ ದೇಶದ ಸಂಸತ್‌ನಲ್ಲಿ ಕನ್ನಡ ಭಾಷೆ ಮಾತನಾಡುವ ಮೂಲಕ ತುಮಕೂರು ಮೂಲದ ಕನ್ನಡಿಗ, ಕೆನಡಾದ ಸಂಸದ ಚಂದ್ರ ಆರ್ಯ ಅವರು ಸಮಸ್ತ ಕನ್ನಡಿಗರ ಹೃದಯ ಗೆದ್ದಿದ್ದಾರೆ.

‘ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಅನ್ನೋದು ರಾ‍ಷ್ಟ್ರಕವಿ ಕುವೆಂಪು ಅವರ ಪ್ರಸಿದ್ಧ ಮಾತು. ಅದರಂತೆ ಮಾತೃಭಾಷೆಯ ಮೇಲೆ ಅಪಾರ ಅಭಿಮಾನ, ಪ್ರೀತಿ ಉಳ್ಳವರು ಎಲ್ಲೇ ಹೋದರೂ ತಮ್ಮ ಭಾಷೆಯ ಹಿರಿಮೆಯನ್ನು ಸಾರಲು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಅದರಂತೆ ದೂರದ ಕೆನಡಾದಲ್ಲಿ ಕಸ್ತೂರಿ ಕನ್ನಡ ಭಾಷೆ ಮೊಳಗಿದೆ. ಅದರಲ್ಲೂ ವಿಶೇಷವಾಗಿ ಕೆನಡಾದ ಪಾರ್ಲಿಮೆಂಟ್‌ನಲ್ಲಿ ಕನ್ನಡಿಗರೊಬ್ಬರು ಮಾತೃ ಭಾಷೆ ಕನ್ನಡವನ್ನು ಮಾತನಾಡೋ ಮೂಲಕ ಸಮಸ್ತ ಕನ್ನಡಿಗರ ಹೃದಯ ಗೆದ್ದಿದ್ದಾರೆ.

ಹೌದು, ಕೆನಡಾದ ಪಾರ್ಲಿಮೆಂಟ್‌ ಸಂಸದರಾಗಿರುವ ತುಮಕೂರು ಮೂಲದ ಕನ್ನಡಿಗ ಚಂದ್ರ ಆರ್ಯ ಅವರು ‘ನಾನು ನನ್ನ ಮಾತೃಭಾಷೆ ಕನ್ನಡದಲ್ಲೇ ಮಾತನಾಡುತ್ತೇನೆ’ ಎಂದು ಹೇಳುವ ಮೂಲಕ ಸಿರಿಗನ್ನಡದ ಕಂಪನ್ನು ಹೊರಜಗತ್ತಿನಲ್ಲಿ ಪಸರಿಸಿದ್ದಾರೆ. ಕೆನಡಾದ ಕನ್ನಡಿಗ ಸಂಸದ ಚಂದ್ರ ಆರ್ಯ ಕನ್ನಡ ಮಾತು ಹೀಗಿದೆ.

‘ಮಾನ್ಯ ಸಭಾಪತಿ, ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ದ್ವಾರಾಳು ಗ್ರಾಮದ ವ್ಯಕ್ತಿಯೊಬ್ಬ ಕೆನಡಾ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಕನ್ನಡದಲ್ಲಿ ಮಾತನಾಡುವುದು ಸುಮಾರು 5 ಕೋಟಿ ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಕೆನಡಾ ದೇಶದ ಕನ್ನಡಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್‌ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ರಾಷ್ಟ್ರಕವಿ ಕುವೆಂಪು ಬರೆದಿರುವ ಮತ್ತು ನಟಸಾರ್ವಭೌಮ ಡಾ ರಾಜ್‌ಕುಮಾರ್ ಹಾಡಿರುವ ಭಾವಗೀತೆಯ ಕೆಲವು ಪದಗಳೊಂದಿಗೆ ನನ್ನ ಹೇಳಿಕೆಯನ್ನು ಮುಗಿಸುತ್ತಿದ್ದೇನೆ. ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಧನ್ಯವಾದಗಳು ಸಭಾಪತಿ.’ಚಂದ್ರ ಆರ್ಯ ಅವರ ಮಾತು ಮುಕ್ತಾಯವಾಗುತ್ತಿದ್ದಂತೆ ಸಂಸತ್‌ನಲ್ಲಿ ಚಪ್ಪಾಳೆಯ ಸದ್ದು ಮೊಳಗಿತು. ಇವರ ಭಾಷಣದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಚಂದ್ರ ಆರ್ಯರ ಕನ್ನಡಾಭಿಮಾನಕ್ಕೆ ವ್ಯಾಪ ಪ್ರಶಂಸೆ ವ್ಯಕ್ತವಾಗಿದೆ.

ಯಾರು ಈ ಚಂದ್ರ ಆರ್ಯ?

ಚಂದ್ರ ಆರ್ಯ ಅವರು ಮೂಲತಃ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ದ್ವಾರಾಳು ಗ್ರಾಮದವರಾಗಿದ್ದು, ಕೆನಡಾದ ಲಿಬರಲ್‌ ರಾಜಕಾರಣಿಯಾಗಿರುವ ಅವರು, 2015ರ ಫೆಡರಲ್ ಚುನಾವಣೆಯಲ್ಲಿ ಹೌಸ್ ಆಫ್ ಕಾಮನ್ಸ್‌ನಲ್ಲಿ ನೇಪಿಯನ್ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದರು. 2019ರಲ್ಲಿ ಪುನರಾಯ್ಕೆಯಾದ ಅವರು ಪ್ರಸ್ತುತ ಅಂತರಾಷ್ಟ್ರೀಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ……