ಗಂಗಾವತಿ ತಾಲೂಕಿನ ಹೇಮಗುಡ್ಡದ ಐತಿಹಾಸಿಕ ಪ್ರಸಿದ್ಧ ಶ್ರೀ ದುರ್ಗಾದೇವಿ ದೇಗುಲದಲ್ಲಿ ಶರನ್ನವರಾತ್ರೊತ್ಸವ ನಿಮಿತ್ತ ಆನೆಯ ಮೇಲಿನ ಅಂಬಾರಿ ಮೆರವಣಿಗೆ ಶುಕ್ರವಾರ ಅದ್ದೂರಿಯಾಗಿ ಜರುಗಿತು.ದೇಗುಲದಲ್ಲಿ ಒಂಭತ್ತು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ವಿಜಯ ದಶಮಿ ನಿಮಿತ್ತ ದೇವಿ ಪುರಾಣದ ಮಂಗಲ, 60 ಜೋಡಿಗಳ ಸಾಮೂಹಿಕ ವಿವಾಹ ಮತ್ತು ರಥೋತ್ಸವ ಜರುಗಿತು. ಸಂಜೆ ವೇಳೆ ಶ್ರೀದುರ್ಗಾದೇವಿ ವಿಗ್ರಹವನ್ನು ಆನೆಯ ಮೇಲಿನ ಅಂಬಾರಿಯಲ್ಲಿಟ್ಟು ಪಾದಗಟ್ಟೆವರೆಗೂ ವಿವಿಧ ಕಲಾ ತಂಡಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನೆರವೇರಿಸಲಾಯಿತು. ಹಗಲು ವೇಷಧಾರಿಗಳು, ಧಾರವಾಡದ ಜಗ್ಗಲಿ ಮೇಳ, ಜಾಂಜ್ ಮೇಳ, ಬಸವ ಕುಣಿತ, ಕಹಳೆ ವಾದನ ಮತ್ತು ಡೊಳ್ಳು ಕುಣಿತದ ತಂಡಗಳು ಭಾಗವಹಿಸಿದ್ದವು.
ಶ್ರೀ ದುರ್ಗಾದೇವಿ ವಿಗ್ರಹಕ್ಕೆ ಪುಷ್ಪಾರ್ಪಣೆ ಸಲ್ಲಿಸುವ ಮೂಲಕ ಮಾಜಿ ಸಂಸದ ಎಚ್.ಜಿ.ರಾಮುಲು ಮತ್ತು 9 ದಿನ ಕಠಿಣ ವ್ರತ ಕೈಗೊಂಡಿದ್ದ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಚಾಲನೆ ನೀಡಿದರು. ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ, ಕೆ.ಹಾಲಪ್ಪಾಚಾರ್, ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಇತರರಿದ್ದರು.ತಾಲೂಕಿನ ಆನೆಗೊಂದಿ ವಾಲಿಕಿಲ್ಲಾ ಮ್ಯಾಗೋಟದ ಐತಿಹಾಸಿಕ ಪ್ರಸಿದ್ಧ ಶ್ರೀ ಆದಿಶಕ್ತಿ ದೇಗುಲದಲ್ಲಿ ಶರನ್ನವರಾತ್ರೋತ್ಸವ ನಿಮಿತ್ತ ಆನೆ ಅಂಬಾರಿ ಮೆರವಣಿಗೆ ಶನಿವಾರ ಅದ್ದೂರಿಯಾಗಿ ನೆರವೇರಿತು. ಅಲಂಕೃತ ಆದಿಶಕ್ತಿ ವಿಗ್ರಹವನ್ನು ಅಂಬಾರಿಯಲ್ಲಿಟ್ಟು ದೇಗುಲದಿಂದ ಶ್ರೀರಂಗನಾಥ ದೇಗುಲದವರೆಗೂ ನೆರವೇರಿಸಲಾಯಿತು. ಲಂಬಾಣಿ ಸಂಪ್ರಾದಾಯಕ ನೃತ್ಯ, ಕೋಲಾಟ ತಂಡ, ನಂದಿಕೋಲು, ಡೊಳ್ಳು ಕುಣಿತ, ಗೊಂಬೆ ಮೇಳ, ಹಗಲುವೇಷಧಾರಿಗಳು, ಮಕ್ಕಳ ನವದುರ್ಗೆಯರ ವೇಷಭೂಷಣ ಸೇರಿ ವಿವಿಧ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ದೇಗುಲದ ಮುಖ್ಯಸ್ಥ ವೇ.ಮೂ.ಬ್ರಹ್ಮಯ್ಯಸ್ವಾಮಿ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು……