ದೈವ ಸನ್ನಿಧಿ:
ಭಾರತದಲ್ಲೇ ಪವಿತ್ರವಾದ ಸ್ಥಳ ಎಂದೇ ಪರಿಗಣಿಸಲ್ಪಡುವ ಪ್ರದೇಶ, ಉತ್ತರ ಪ್ರದೇಶದ ವಾರಣಾಸಿ.ಕಾಶಿ, ಬನಾರಸ್ ಎಂದೂ ವಾರಣಾಸಿಯನ್ನು ಕರೆಯಲಾಗುತ್ತದೆ.ಉತ್ತರ ಭಾರತದ ಗಂಗಾ ತಟದಲ್ಲಿ ನಿರ್ಮಿತವಾದ ಈ ಪ್ರದೇಶ ಧಾರ್ಮಿಕತೆಯ ಜೊತೆಗೆ ಕರಕುಶಲ ಮತ್ತು ವಾಸ್ತು ಶಿಲ್ಪಕಲೆಗಳ ಬೀಡು.ಐತಿಹಾಸಿಕವಾಗಿ,ಪೌರಾಣಿಕವಾಗಿಯೂ ಪ್ರಸಿದ್ಧಿ ಪಡೆದಿರುವ ವಿಶ್ವನಾಥನ ನೆಲವೀಡು.ಈ ಊರು ಹಲವು ರೀತಿಯ ಅಚ್ಚರಿಗಳೊಂದಿಗೆ ನಂಬಿಕೆಗಳನ್ನೂ ಒಳಗೊಂಡಿರುವ ಐತಿಹಾಸಿಕ ತೀರ್ಥ ಕ್ಷೇತ್ರ.
ವಾರಣಾಸಿಯಲ್ಲಿ 87 ಘಾಟ್‌ಗಳನ್ನು ಕಾಣಬಹುದು. ವಾರಣಾಸಿಯ ಘಾಟ್‌ಗಳು ಮಾನವ ದೇಹದ ಪಂಚತತ್ತ್ವಗಳನ್ನು ಪ್ರತಿನಿಧಿಸುತ್ತವೆ ಎಂಬ ನಂಬಿಕೆಯಿದೆ. ನದಿ ತಟದಲ್ಲಿ ದೇಹ ಸಂಸ್ಕಾರ ನಡೆಯುವ ದೇಶದ ಕೆಲವು ಪ್ರದೇಶಗಳಲ್ಲಿ ವಾರಣಾಸಿಯೂ ಒಂದು. ಜೀವನದ ಆದಿ ಅಂತ್ಯ ಎರಡನ್ನೂ ಒಟ್ಟಾಗಿ ಈ ಪ್ರದೇಶದಲ್ಲಿ ಕಾಣಬಹುದಾಗಿದೆ. ಹೀಗಾಗಿ ಪ್ರಪಂಚದಾದ್ಯಂತ ಜನರು ನಿರಂತರವಾಗಿ ವಾರಣಾಸಿಗೆ ಭೇಟಿಕೊಡುತ್ತಾರೆ. ಕೆಲವು ಧಾರ್ಮಿಕ ಆಚರಣೆಗೆ ಇನ್ನು ಕೆಲವರು ಪ್ರವಾಸದ ಅನುಭವ ಪಡೆಯಲು ಬರುತ್ತಾರೆ.
* ದಶಾಶ್ವಮೇಧ ಘಾಟ್: ಗಂಗಾನದಿಯ ತಟದಲ್ಲಿ ವಿಶ್ವನಾಥ ದೇವಸ್ಥಾನದ ಹತ್ತಿರ ಇರುವ ಈ ಘಾಟ್, ವಾರಣಾಸಿಯ ಪ್ರಮುಖ ಘಾಟ್ ಎಂದು ಪರಿಗಣಿಸಲ್ಪಡುತ್ತದೆ. ನಿತ್ಯ ಸಂಜೆ ಇಲ್ಲಿ ಜನರು ಭಕ್ತಿಪೂರ್ವಕವಾಗಿ ಆರತಿ ಎತ್ತಿ ವಿಶೇಷ ಪೂಜೆ ಸಲ್ಲಿಸುವ ವಾಡಿಕೆ ಹೊಂದಿದ್ದಾರೆ. ಇದು ದಶಾಶ್ವಮೇಧದ ಸೌಂದರ್ಯಕ್ಕೆ ಮತ್ತಷ್ಟು ಮೆರಗು ತಂದಿದೆ.
* ಮಣಿಕರ್ಣಕಾ ಘಾಟ್: ಇದು ತುಂಬಾ ಹಳೆಯದಾದ ಘಾಟ್. ಇಲ್ಲಿ ದೇಹದ ಅಂತ್ಯಸಂಸ್ಕಾರ ಮಾಡಿದರೆ ಉತ್ತಮ ಪುನರ್ಜನ್ಮ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಈ ಘಾಟ್‌ನ ಸುತ್ತಲೂ ಕಟ್ಟಿಗೆ ಹೊರೆಗಳನ್ನು , ಅಂತ್ಯಸಂಸ್ಕಾರಕ್ಕೆ ಇಟ್ಟಿರುವ ಹೆಣಗಳನ್ನು ಕಾಣಬಹುದು. ಜೀವನ ಮತ್ತು ಸಾವಿನ ನಡುವಿನ ವಿಚಾರಗಳು ಇಲ್ಲಿ ಕಾಣಸಿಗುತ್ತದೆ.
* ದರ್ಬಂಗ್ ಘಾಟ್: ಈ ಘಾಟ್ ಫೋಟೋಗ್ರಾಫಿಗೆ ಉತ್ತಮವಾದ ಸ್ಥಳ ಮತ್ತು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿದೆ. ಇಲ್ಲಿ 1900 ರಲ್ಲಿ ಬಿಹಾರದ ರಾಜ ಮನೆತನ ನಿರ್ಮಿಸಿದ ಗೋಪುರಗಳಿವೆ, ಜೊತೆಗೆ ಶಿವನ ದೇವಸ್ಥಾನವನ್ನೂ ಕಾಣಬಹುದು. ಉತ್ತಮವಾದ ವಾಸ್ತುಶಿಲ್ಪ, ಇಲ್ಲಿನ ಪರಿಸರ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.
* ಅಸ್ಸಿ ಘಾಟ್: ಅಸ್ಸಿಘಾಟ್ ಅತಿದೊಟ್ಟ ಘಾಟ್ ಎಂದು ಕರೆಯಲ್ಪಡುತ್ತದೆ. ಅಸ್ಸಿ ನದಿ ಗಂಗಾನದಿಯನ್ನು ಸೇರುವ ಪ್ರದೇಶ ಇದಾಗಿದ್ದು, ಪ್ರವಾಸಿಗರಿಗೆ ಬೋಟಿಂಗ್ ಅನುಭವ ನೀಡುತ್ತದೆ, ಜೊತೆಗೆ ಇಲ್ಲಿ ಹೊಟೇಲ್ ವ್ಯವಸ್ಥೆ ಕಾಣಬಹುದು. ಈ ಘಾಟ್‌ನ ಬಳಿ ಆಲದ ಮರದ ಕೆಳಗೆ ಶಿವನ ದೇವಸ್ಥಾನವಿದೆ ,ಯಾತ್ರೆಗೆ ಬರುವವರು ಇಲ್ಲಿ ವಿಶೇಷ ಪೂಜೆಯನ್ನೂ ನೆರವೇರಿಸುತ್ತಾರೆ.
* ಚೇತ್ ಸಿಂಗ್ ಘಾಟ್: ಕಿರ್ಕಿ ಘಾಟ್ ಎಂದೂ ಕರೆಯಲ್ಪಡುವ ಈ ಘಾಟ್‌ನ್ನು 4 ವಿಭಾಗಗಳನ್ನಾಗಿ ಮಾಡಲಾಗಿದೆ. ಚೇತ್‌ಸಿಂಗ್, ನಿರಂಜನಿ, ನಿರ್ವಾಣಿ, ಶಿವಾಲ. ಇಲ್ಲಿ ನಡೆಯುವ ಬುಧ್ವಮಂಗಲ ಉತ್ಸವದಲ್ಲಿ ಈ ಘಾಟಗಳ ಸಾಂಸ್ಕೃತಿಕ ಮತ್ತು ಧಾರ್ಮಿಕತೆಯ ಕುರಿತು ತಿಳಿದುಕೊಳ್ಳಬಹುದು. ಈ ಘಾಟ್ ಬಳಿ ಕ್ರಿ.ಶ 1781ರಲ್ಲಿ ವಾರನ್ ಹೇಸ್ಟಿಂಗ್ ಮತ್ತು ಚೇತ್ ಸಿಂಗ್ ನಡುವೆ ಭೀಕರ ಯುದ್ಧ ನಡೆದಿತ್ತು ಎಂಬ ಉಲ್ಲೇಖವಿದೆ.
ಇವೆಲ್ಲ ಘಾಟ್‌ಗಳ ಜೊತೆ ದಿಗ್ಪತೀಯ ಘಾಟ್, ಗಂಗಾ ಮಹಲ್ ಘಾಟ್, ಹರೀಶ್ ಚಂದ್ರ ಘಾಟ್, ಜೈನ್ ಘಾಟ್, ಮಾನಸ ಸರೊವರ ಘಾಟ್, ನಾರದ ಘಾಟ್, ಶಿವಾಲ ಘಾಟ್, ವಿಜಯನಗರಂ ಘಾಟ್ ಹೀಗೆ ಹಲವಾರು ಐತಿಹಾಸಿಕ ಹಿನ್ನೆಲೆಯಿಂದ ಕೂಡಿರುವ ಘಾಟ್‌ಗಳನ್ನು ಕಾಣಬಹುದು.
ಧಾರ್ಮಿಕ ಭಾವದಲ್ಲಿ ಅಥವಾ ಪ್ರವಾಸದ ಅನುಭವ ಪಡೆಯುವ ಸಲುವಾಗಿಯಾದರೂ ಜನರು ವಾರಣಾಸಿಗೆ ಆಗಮಿಸುತ್ತಾರೆ. ಹಲವಾರು ಕಾರಣಗಳಿಂದ ಪ್ರಸಿದ್ಧಿ ಪಡೆದಿರುವ ಈ ಪ್ರದೇಶ ಪವಿತ್ರ ಕ್ಷೇತ್ರವೆಂದೇ ಹೆಸರು ಮಾಡಿದೆ.ಇ ಲ್ಲಿನ ಘಾಟ್‌ಗಳು, ಗೋಪುರಗಳು, ರೇಷ್ಮೆ ಉದ್ಯಮ, ಪ್ರವಾಸೋದ್ಯಮ ಎಲ್ಲವೂ ಒಂದೋದು ಹಿನ್ನೆಲೆಯನ್ನು ಹೊಂದಿರುವುದು ವಿಶೇಷ……