ಮೈಸೂರು:
ಕೈ-ಕಾಲು ನಡುಗುವಿಕೆಯನ್ನು ಹೋಗಿಸ್ತೀನಿ ಎಂದು ಹೇಳಿ ನಕಲಿ ಔಷಧಿ ಕೊಟ್ಟು ಅಮಾಯಕರೊಬ್ಬರಿಂದ 1.50 ಲಕ್ಷ ರೂ. ವಸೂಲಿ ಮಾಡಿ ಇಬ್ಬರು ಪರಾರಿಯಾಗಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ವಿಜಯನಗರದ ನಿವಾಸಿ ರಾಜೇಗೌಡ ಎಂಬುವರು ಖದೀಮರ ಮಾತು ನಂಬಿ ಹಣ ಕಳೆದುಕೊಂಡವರು. ಗುರು ಮತ್ತು ಮನೋಜ್ ಕುಮಾರ್ ಎಂಬಿಬ್ಬರು ಮೋಸ ಮಾಡಿದ ಕಿಲಾಡಿಗಳು ಎನ್ನಲಾಗಿದೆ.
ಸೆ. 27ರ ಸಂಜೆ ವಿಜಯನಗರದಲ್ಲಿ ರಾಜೇಗೌಡ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಗುರು ಎಂಬಾತ, ನೀವು ಯಾಕೆ ಕೈ-ಕಾಲುಗಳನ್ನು ನಡುಕ ಮಾಡಿ ನಡೆಯುತ್ತೀರಿ ಎಂದು ಕೇಳಿದ್ದಾನೆ. ನನಗೆ ಫ್ರಾಕಿಸನ್ ಕಾಯಿಲೆ ಇದೆ. ಇದು ವಾಸಿಯಾಗಲ್ಲ ಎಂದು ರಾಜೇಗೌಡ ತಿಳಿಸಿದಾಗ, ಈ ಮಾತನ್ನೇ ಬಂಡವಾಳ ಮಾಡಿಕೊಂಡ ಗುರು, ನಮ್ಮ ತಂದೆಗೆ ಇದೇ ಕಾಯಿಲೆ ಇತ್ತು. ಕೆ.ಆರ್ ಮೊಹಲ್ಲಾದ ಸಂಜೀವಿನಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಔಷಧಿ ಕೊಡುತ್ತಾರೆ. ಅಲ್ಲಿ ಔಷಧಿ ತೆಗೆದುಕೊಂಡಿದ್ದರಿಂದ ನಮ್ಮ ತಂದೆಗೆ ಈಗ ವಾಸಿಯಾಗಿದೆ. ಅಲ್ಲಿ ನೀವು ಔಷಧಿ ತಗೊಳ್ಳಿ. ನಾನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಅದೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ.ಅಲ್ಲಿ ಮನೋಜ್ ಕುಮಾರ್ ಎಂಬುವರನ್ನು ತೋರಿಸಿ ಪರಿಚಯಿಸಿ, ಕಾಯಿಲೆ ಬಗ್ಗೆ ವಿಚಾರ ಮಾಡಿ ನೀವು ಔಷಧಿ ತೆಗೆದುಕೊಳ್ಳಿ. 15 ದಿನದಲ್ಲಿ ವಾಸಿಯಾಗಿತ್ತೆ. ಅದಕ್ಕೆ 1.50 ಲಕ್ಷ ರೂ. ಹಣ ಆಗುತ್ತೆ ಎಂದು ಮನೋಜ್ ಕುಮಾರ್ ಹೇಳಿದ್ದಾನೆ.
ಇದನ್ನು ನಂಬಿದ ರಾಜೇಗೌಡ 70 ಸಾವಿರ ರೂ. ಕೊಡುತ್ತಾರೆ. ಹಣ ಪಡೆದ ಗುರು ಹಾಗೂ ಮನೋಜ್ ಕುಮಾರ್, 8,500/-ರೂ ಹಾಗೂ 9,500/- ರೂ.ಗಳ ಔಷಧಿಗಳಿವೆ ಎಂದು ಔಷಧಿಯನ್ನು ತೋರಿಸಿ, ಅದನ್ನು 2 ಲೀಟರ್ ಕೊಬ್ಬರಿ ಎಣ್ಣೆಯಿಂದ ಮಿಕ್ಸ್ ಮಾಡಿ ಮೈ-ಕೈಗಳಿಗೆ ಹಚ್ಚಿ ಎಂದು ಕೊಟ್ಟಿದ್ದಾರೆ.
ಇದಾದ ನಂತರ ಸೆ. 28ರಂದು ಗುರು, ರಾಜೇಗೌಡರನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ, ಕರ್ನಾಟಕ ಬ್ಯಾಂಕ್ನಲ್ಲಿ 80 ಸಾವಿರ ರೂ.ಗಳಿಗೆ ರಾಮನ್ ಎನ್. ಪಂಡಿತ್ ಎಂಬುವರ ಹೆಸರಿಗೆ ಚೆಕ್ ಬರೆದುಕೊಡುವಂತೆ ಒತ್ತಾಯ ಮಾಡಿದ್ದಾನೆ. ಅಂತೆಯೇ ರಾಜೇಗೌಡ ಬರೆದುಕೊಟ್ಟಿದ್ದಾರೆ. ಬಳಿಕ ಈಗ ಮನೆಗೆ ಹೋಗಿ. ಸಂಜೆ ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಹೊರಟು ಹೋಗಿದ್ದಾನೆ.
ಸೆ. 29ರಂದು ರಾಜೇಗೌಡ ಅವರ ಕರ್ನಾಟಕ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿರುತ್ತೆ. ನಂತರ 4 ದಿನ ಬಿಟ್ಟು ಮಾನೋಜ್ ಕುಮಾರ್ಗೆ ಕರೆ ಮಾಡಿದಾಗ ಮೊಬೈಲ್ ಆಫ್ ಆಗಿದೆ. ಅನುಮಾನದ ವಾಸನೆ ಬಂದ ನಂತರ, ಇವರು ವಾಸವಾಗಿದ್ದ ವನಜಾಕ್ಷಿ ಎಂಬುವವರ ಮನೆಯಲ್ಲಿ ವಿಚಾರಿಸಿದಾಗ, ಇಬ್ಬರೂ 2 ತಿಂಗಳು ಮಾತ್ರ ಬಾಡಿಗೆಯನ್ನು ಕೊಟ್ಟು, ಅಡ್ವಾನ್ಸ್ ಕೊಡದೇ ಎಲ್ಲಿ ಹೋಗಿದ್ದಾರೆ ಎಂಬುದು ಗೊತ್ತಾದಾಗ ಖದೀಮರ ಬಣ್ಣ ಬಯಲಾಗಿದೆ..
ಹಣ ಪಡೆದು ನಕಲಿ ಔಷಧಿ ನೀಡಿ ಮೋಸ ಮಾಡಿರುವ ಗುರು ಮತ್ತು ಮನೋಜ್ ಕುಮಾರ್ ವಿರುದ್ಧ ಕ್ರಮ ಜರುಗಿಸಬೇಕೆಂದು ಕೆ.ಆರ್ ಠಾಣೆಯಲ್ಲಿ ರಾಜೇಗೌಡ ದೂರು ದಾಖಲಿಸಿದ್ದಾರೆ……