ಮೈಸೂರು:
ಪೊಲೀಸ್ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ. ವೃತ್ತಿಯನ್ನು ಪ್ರಾಮಾಣಿಕತೆ, ನಿಷ್ಠೆಯಿಂದ ಮಾಡಿ. ಕಾನೂನು ರಕ್ಷಿಸಿ ನಾಡಿನಲ್ಲಿ ಶಾಂತಿಯ ವಾತಾವರಣ ನಿರ್ಮಿಸಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮೈಸೂರು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ 34ನೇ ತಂಡದ ಪೊಲೀಸ್ ಉಪಾಧೀಕ್ಷಕ ಪ್ರಶಿಕ್ಷಣಾರ್ಥಿಗಳು ಹಾಗೂ 1ನೇ ತಂಡದ ಸಹಾಯಕ ಕಾರಾಗೃಹ ಅಧೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಶಿಕ್ಷಣಾರ್ಥಿಗಳಿಗೆ ಒಂದು ವರ್ಷದಿಂದ ಶಿಸ್ತುಬದ್ಧವಾಗಿ ಹಾಗೂ ಕಠಿಣ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಲು ಮಾನಸಿಕವಾಗಿ ಸದೃಢಗೊಳಿಸಿ ತರಬೇತಿ ನೀಡಲಾಗಿದೆ. ಯಾವುದೇ ಒತ್ತಡಕ್ಕೆ ಮಣಿಯದೇ ಕಾರ್ಯನಿರ್ವಹಿಸಿ. ತರಬೇತಿಯ ನಂತರ ಸ್ಥಳ ನಿಯುಕ್ತಿಗೆ ರಾಜಕಾರಣಿಗಳ ಮನೆ ಬಾಗಿಲು ತಟ್ಟಬೇಡಿ. ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಹೇಳಿದರು.
ಶ್ರದ್ಧೆ ಮತ್ತು ನಿಷ್ಠೆ ಇದ್ದರೆ ಯಾವುದೇ ರಾಜಕಾರಣಿ ಹಾಗೂ ಸರ್ಕಾರ ನಿಮ್ಮನ್ನು ತೊಂದರೆಗೆ ಸಿಲುಕಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಹಲವಾರು ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರು ಎಷ್ಟೇ ದೊಡ್ಡವರಿರಲಿ ಯಾವುದೇ ಒತ್ತಡಕ್ಕೆ ಒಳಗಾಗದೇ ಕಠಿಣ ನಿರ್ಧಾರ ತೆಗೆದುಕೊಳ್ಳುವ ದೃಢ ಸಂಕಲ್ಪವನ್ನು ಇಂದಿನಿಂದಲೇ ರೂಢಿಸಿಕೊಳ್ಳಿ ಎಂದರು.
ಸರ್ಕಾರ ಹಾಗೂ ಜನಪ್ರತಿನಿಧಿಗಳು ಬದಲಾಗುತ್ತಾರೆ. ಪೊಲೀಸ್ ಅಧಿಕಾರಿಗಳಾಗಿ ಅಧಿಕಾರ ಸ್ವೀಕರಿಸುವ ಪ್ರಶಿಕ್ಷಣಾರ್ಥಿಗಳು ಸುದೀರ್ಘವಾಗಿ ವೃತ್ತಿಯಲ್ಲಿರುತ್ತಾರೆ. ವೃತ್ತಿ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡು, ಯಾವುದೇ ಲೋಪವಿಲ್ಲದೇ ಕಾರ್ಯನಿರ್ವಹಿಸಿ ನಾಡಿನ ರಕ್ಷಣೆ ಮಾಡಿ ಜನತೆಗೆ ಸುಭದ್ರ ವಾತಾವರಣ ನೀಡಿ ಎಂದರು…….