ಕೋಲಾರ:
ಯರಗೋಳ್ ಯೋಜನೆಯನ್ನು 2019ರ ಜೂನ್ ಅಂತ್ಯಕ್ಕೆ ಮುಗಿಸುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದು, ಕೆಲ ಆಡಳಿತಾತ್ಮಕ ಸಮಸ್ಯೆಬಗೆಹರಿಸಲು ನ.5ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಸ್ಪೀಕರ್ ಕೆ.ಆರ್. ರಮೇಶ್ಕುಮಾರ್ ತಿಳಿಸಿದರು.
ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಸಭೆ ನಡೆಸಿ, ಯುಗಾದಿ ವೇಳೆಗೆ ಕಾಮಗಾರಿ ಮುಗಿಸಲು ನೀಡಿದ್ದ ಗಡುವನ್ನು ವಿಸ್ತರಿಸಲಾಗದು ಎಂದು ಸ್ಪಷ್ಟಪಡಿಸಿದರು.ಮಂಡಳಿಯಿಂದ ಬರಬೇಕಿರುವ 18 ಕೋಟಿ ರೂ. ನೀಡಿದರೆ ಕಾಮಗಾರಿಗೆ ವೇಗ ನೀಡಿ ಜೂನ್ ಅಂತ್ಯದೊಳಗೆ ಮುಗಿಸಿಕೊಡಲು ಸಿದ್ಧ ಎಂದು ಗುತ್ತಿಗೆದಾರ ಗುಂಟೂರು ಶಾಸಕ ವೇಣುಗೋಪಾಲರೆಡ್ಡಿ ತಿಳಿಸಿದರು.
6 ಅಡಿ ಎತ್ತರಕ್ಕೆ ಡ್ಯಾಂ ಕಾಮಗಾರಿ ಆಗಿದೆ. ಗುರಿಗೆ ತಕ್ಕ ಕೆಲಸ ಆಗದಿರುವುದರಿಂದ ಹಣ ಬಿಡುಗಡೆಯಾಗಿಲ್ಲ ಎಂದು ಒಳಚರಂಡಿ ಮಂಡಳಿ ಮುಖ್ಯ ಇಂಜಿನಿಯರ್ ಕೆ.ವಿ.ಶ್ರೀಕೇಶವ ಹೇಳಿದರು. ನ.7ರೊಳಗೆ ಅವಶ್ಯವಿರುವ ಕಾರ್ಯಾದೇಶ ನೀಡುತ್ತೇವೆ. ಕಾಮಗಾರಿ ಆದಂತೆಯೇ 24 ಗಂಟೆಯೊಳಗೆ ಹಣ ನೀಡಲಾಗುತ್ತಿದೆ ಎಂದು ಮಂಡಳಿ ಎಇ ವೆಂಕಟೇಶ್ ನುಡಿದರು.
ಟೇಬಲ್ ವರ್ಕ್ ಮಾಡಿಕೊಡಲು ಏನು ಕಷ್ಟ? ನೋವು ಅರ್ಥ ಮಾಡಿಕೊಳ್ಳಿ, ತಾಳ್ಮೆ ಪರೀಕ್ಷಿಸಿ ಸಹನೆ ಒಡೆಯಲು ಅವಕಾಶ ನೀಡಬೇಡಿ. ನನ್ನ ಹಾಗೂ ಶಾಸಕ ಕೆ. ಶ್ರೀನಿವಾಸಗೌಡರ ಆಯಸ್ಸು ಮುಗಿಯುತ್ತಿದೆ. ಜನರ ಋಣ ತೀರಿಸುವ ಆಸೆ ನಮ್ಮದು. ನಿಮ್ಮಿಂದ ಸಹಕಾರ ಸಿಗದಿದ್ದರೆ ತೊಂದರೆಯಾಗುತ್ತದೆ, ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತೀರಿ ಎಂದು ರಮೇಶ್ಕುಮಾರ್ ಅಧಿಕಾರಿಗಳನ್ನು ಎಚ್ಚರಿಸಿದರು.
ಶಾಸಕ ಕೆ. ಶ್ರೀನಿವಾಸಗೌಡ ಮಾತನಾಡಿ, ಸಕಾಲಕ್ಕೆ ಕೆಲಸ ಆಗಬೇಕು. ಎಲ್ಲ ಸಹಕಾರ ನೀಡಲು ಬದ್ಧರಾಗಿದ್ದೇವೆ. ಅಧಿಕಾರಿಗಳಿಂದ ವಿಳಂಬ ಆಗುತ್ತಿದ್ದಲ್ಲಿ ಗಮನಕ್ಕೆ ತನ್ನಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ನಿರ್ದೇಶಕ ನಾಗನಾಳ ಸೋಮಣ್ಣ, ಎಂಎಸ್ಐಎಲ್ ಮಾಜಿ ಅಧ್ಯಕ್ಷ ಎಂ.ಎಲ್.ಅನಿಲ್ಕುಮಾರ್, ಪರಿಸರವಾದಿ ತ್ಯಾಗರಾಜ್ ಇತರ ಅಧಿಕಾರಿಗಳು ಹಾಜರಿದ್ದರು…….