ಬಳ್ಳಾರಿ:
ಮುಂಬರುವ 2019ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿಸಲು ನನ್ನ ಸಂಪೂರ್ಣ ಬೆಂಬಲವಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಅಲ್ಲ ಎನ್ನುವ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ನಾನು ಪ್ರತಿಕ್ರಿಯಿಸಲು ಹೋಗಲ್ಲ. ರಾಹುಲ್ ಗಾಂಧಿ ಬಗ್ಗೆ ಲಘುವಾಗಿ ಮಾತನಾಡಲು ಸಿದ್ಧವಿಲ್ಲ. 130 ವರ್ಷದ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿಯವರು ಕಳೆದ 2 ವರ್ಷಗಳಿಂದ ಅನುಭವ ಪಡೆಯುತ್ತಿದ್ದಾರೆ. ಹಾಗಾಗಿ 2019ರಲ್ಲಿ ಲೋಕಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ದೇಶದ ಪ್ರಾದೇಶಿಕ ಪಕ್ಷಗಳು ಮತ್ತು ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.
ಎನ್‌ಡಿಎ ಮೈತ್ರಿಕೂಟದಿಂದ ಹೊರ ಬಂದಿರುವ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 1996ರ ಮಾದರಿಯಲ್ಲಿ ತೃತೀಯರಂಗ ರಚಿಸಲು ಸಿದ್ಧತೆ ನಡೆಸುತ್ತಿರಬಹುದು. ಆದರೆ, ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ತೃತೀಯರಂಗ ಇಲ್ಲ. ಕಾಂಗ್ರೆಸ್ ಸೇರಿ ಪ್ರಾದೇಶಿಕ ಪಕ್ಷಗಳೆಲ್ಲರೂ ಮಹಾಘಟ ಬಂಧನ್‌ನಲ್ಲಿ ಸೇರಲಿವೆ. ಸ್ಥಾನಗಳ ಹಂಚಿಕೆಯಲ್ಲಿ ಒಂದಷ್ಟು ಅಸಮಾಧಾನ ಮೂಡುವುದು ಸಹಜ. ಅದೆಲ್ಲವೂ ಸರಿಯಾಗಲಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸುವುದೇ ಒಕ್ಕೂಟದ ಉದ್ದೇಶವಾಗಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಐದು ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ಮೊದಲ ಹಂತವಾಗಿದೆ ಎಂದು ತಿಳಿಸಿದರು….