ನವದೆಹಲಿ:
ಭಾರತ ಹಾಗೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ಕೊನೆಗೂ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿದೆ.
ಪಾಕಿಸ್ತಾನದ ಸಂಸತ್ ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದ್ದಾರೆ.ಭಾರತ ಮತ್ತು ಪಾಕಿಸ್ತಾನ ನಡುವೆ ಬಿಗಡಾಯಿಸಿರುವ ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಜೊತೆಗೆ ಮಾತುಕತೆಗೆ ಸಿದ್ಧ ಎಂದು ಮೊಹಮ್ಮದ್ ಖುರೇಷಿ ಹೇಳಿದ ಕೆಲ ತಾಸುಗಳಲ್ಲೇ ಇಮ್ರಾನ್ ಖಾನ್ ಈ ರೀತಿಯ ಹೇಳಿಕೆ ನೀಡಿದ್ದಾರೆ.ಶಾಂತಿಗಾಗಿ ನಾವು ಬಯಸುತ್ತೇವೆ. ನಾಳೆ ಭಾರತದ ವಾಯುಪಡೆ ಪೈಲಟ್ ಬಿಡುಗಡೆ ಮಾಡಿ ಮೊದಲ ಹಂತವಾಗಿ ಮಾತುಕತೆ ನಡೆಸುವುದಾಗಿ ಇಮ್ರಾನ್ ಖಾನ್ ಹೇಳಿದ್ದಾರೆ.
ನಿನ್ನೆ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಗಸ್ತು ತಿರುಗುತ್ತಿದ್ದಾಗ ಜೆಟ್ ಪತನಗೊಂಡು ವಿಂಗ್ ಕಮಾಂಡರ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸುರಕ್ಷಿತವಾಗಿ ಇಳಿದಿದ್ದರು.ನಂತರ ಅಲ್ಲಿನ ಜನತೆ ಅವರನ್ನು ಹಿಡಿದು ಥಳಿಸಿ ಪಾಕ್ ಸೇನೆ ವಶಕ್ಕೆ ನೀಡಿದ್ದರು.
ಅಭಿನಂದನ್ ಪಾಕಿಸ್ತಾನದ ವಶಕ್ಕೆ ಸಿಕ್ಕ ಸುದ್ದಿ ತಿಳಿಯುತ್ತಿದ್ದಂತೆ ಭಾರತದಾದ್ಯಂತ ಪಾಕಿಸ್ತಾನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಭಿನಂದನ್ ಸುರಕ್ಷಿತವಾಗಿ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸುತ್ತಿದ್ದರು ಕೊನೆಗೂ 130 ಕೋಟಿ ಜನರ ಪ್ರಾರ್ಥನೆ ಇಂದು ಫಲಿಸಿದ್ದು ನಾಳೆ ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ವಾಪಸ್ ಬರಲಿದ್ದಾರೆ….