ಮಾಲೂರು:
ಪುರಸಭೆ ವ್ಯಾಪ್ತಿಯಲ್ಲಿ 7 ಸ್ಥಳ ಗುರುತಿಸಿ 7 ದಿನ ಕಂದಾಯ ವಸೂಲಾತಿ ಸಪ್ತಾಹ ಹಮ್ಮಿಕೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಸ್.ಪ್ರಸಾದ್ ತಿಳಿಸಿದರು.ಪಟ್ಟಣದ ಪುರಸಭೆ ಸಭಾಭವನದಲ್ಲಿ ಸೋಮವಾರ ಅಧ್ಯಕ್ಷ ಸಿ.ಪಿ.ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಕಂದಾಯ ಹಾಗೂ ನೀರಿನ ತೆರಿಗೆ ಬಾಕಿ ಇರುವವರು ಮತ್ತು ಅನಧಿಕೃತವಾಗಿ ಒಳಚರಂಡಿ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಕೊಳಾಯಿ ಸಂಪರ್ಕ ಪಡೆದಿರುವವರು ಯಾವುದೇ ದಂಡವಿಲ್ಲದೆ ಶುಲ್ಕ ಪಾವತಿಸಿ ಅಧಿಕೃತ ಮಾಡಿಕೊಳ್ಳಲು ಜನತೆಗೆ ಸುವರ್ಣಾವಕಾಶ ಕಲ್ಪಿಸಲಾಗಿದೆ ಎಂದರು.
ಸ್ಥಳೀಯ ಬ್ಯಾಂಕ್ ಸಿಬ್ಬಂದಿಯನ್ನು ಸಪ್ತಾಹದಲ್ಲಿ ಭಾಗವಹಿಸುವಂತೆ ಮಾಡಿ ಸ್ಥಳದಲ್ಲೇ ಶುಲ್ಕ ಪಾವತಿಸಿಕೊಳ್ಳಲು ಅನುಕೂಲ ಕಲ್ಪಿಸಲಾಗುವುದು. ಈ ಬಗ್ಗೆ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಪಡೆದು ಶೀಘ್ರ ಕರಪತ್ರದ ಮೂಲಕ ಜನರಲ್ಲಿ ಕಂದಾಯ ವಸೂಲಾತಿ ಸಪ್ತಾಹದ ಅರಿವು ಮೂಡಿಸಲಾಗುವುದು ಎಂದರು.
ರಾಮಮೂರ್ತಿ ಮಾತನಾಡಿ, ಪುರಸಭೆ ವ್ಯಾಪ್ತಿಯ ಸಿಎ ನಿವೇಶನಗಳಿಗೆ ಕಾಂಪೌಂಡ್ ನಿರ್ವಿುಸಿ ಪುರಸಭೆ ಸ್ವತ್ತೆಂದು ನಾಮಫಲಕ ಹಾಕಬೇಕು. ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿ, ಸ್ವಚ್ಛತೆ ಕಾಪಾಡಿ ಜಿಲ್ಲೆಯಲ್ಲೇ ಮಾದರಿ ಪುರಸಭೆಯನ್ನಾಗಿ ಮಾಡಬೇಕು ಎಂದರು.
ಶಾಸಕ ಕೆ.ವೈ.ನಂಜೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ವಿಜಯಲಕ್ಷಿ್ಮೕ, ಪುರಸಭೆ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ಎಂ.ರಾಮಮೂರ್ತಿ, ಲಕ್ಷಿ್ಮೕನಾರಾಯಣ್, ಹನುಮಂತರೆಡ್ಡಿ, ಎಂ.ವಿ.ವೇಮನ, ಎಚ್.ವಿ.ಲಿಂಗೇಶ್ವರಯ್ಯ, ಎಸ್.ಸೋಮಶೇಖರ್, ಭಾರತಮ್ಮ ನಂಜುಂಡಪ್ಪ, ಮುರಳೀಧರ್, ಮಂಜುನಾಥ್, ಕಂದಾಯಾಧಿಕಾರಿ ಮಲ್ಲೇಶಯ್ಯ, ಇಂಜಿನಿಯರ್ ಮಂಜುನಾಥ್ ಇತರರಿದ್ದರು…..