ಬೆಂಗಳೂರು:
ಬಿಗ್ಬಾಸ್ ರಿಯಾಟಲಿ ಶೋ ದಿನದಿಂದ ದಿನಕ್ಕೆ ತನ್ನ ಕುತೂಹಲವನ್ನು ದ್ವಿಗುಣಗೊಳಿಸುತ್ತಿದೆ. ಮೊನ್ನೆ ಶಂಕರ್ನಾಗ್ ಹಾಗೂ ಮಂಜುಳಾ ಬಗ್ಗೆ ರವಿಬೆಳಗೆರೆ ಅವರು ಮಾತನಾಡಿದ್ದರು. ಇದೀಗ ಹಿರಿಯ ನಟ ಜೈ ಜಗದೀಶ್ ಶಂಕರ್ನಾಗ್ ಬಗ್ಗೆ ಕುತೂಹಲಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಅಚ್ಚಳಿಯದೇ ಉಳಿದಿರುವ ಹೆಸರುಗಳಲ್ಲಿ ಶಂಕರ್ನಾಗ್ ಕೂಡ ಒಬ್ಬರು. ಅನೇಕ ಹಿಟ್ ಚಿತ್ರಗಳನ್ನು ನೀಡಿ, ಯಶಸ್ವಿ ನಾಯಕ ನಟ ಎನಿಸಿಕೊಂಡಿದ್ದ ಶಂಕರ್ನಾಗ್ ಅವರಿಗೂ ಒಂದು ಕಾಲದಲ್ಲಿ ಕಷ್ಟದ ಪರಿಸ್ಥಿತಿ ಬಂದೊದಗಿತ್ತು ಎಂಬುದನ್ನು ಜೈ ಜಗದೀಶ್ ಬಹಿರಂಗಪಡಿಸಿದ್ದಾರೆ. ನಿನ್ನೆ ನಡೆದ ಸಂಚಿಕೆಯಲ್ಲಿ ಜೈ ಜಗದೀಶ್ ಇತರೆ ಸ್ಪರ್ಧಿಗಳ ಜತೆ ಮಾತನಾಡುವಾಗ ಒಂದು ಪ್ರಶ್ನೆಯನ್ನು ಮುಂದಿಟ್ಟರು. ಒಬ್ಬ ಫೇಮಸ್ ನಟ ತನ್ನ ಮಾರ್ಕೆಟ್ ಬಿದ್ದಾಗ ವ್ಯಾನ್ ಒಳಗೆ ಕ್ಯಾಂಟೀನ್ ಇಟ್ಟುಕೊಂಡು ಓಡಾಡುತ್ತಿದ್ದರು. ಅವರು ಯಾರು ಗೊತ್ತಾ ಎಂದು ಪ್ರಶ್ನಿಸಿದರು.
ಇದಕ್ಕೆ ನಾನಾ ಹೆಸರುಗಳು ಬಂದರೂ ಯಾರೊಬ್ಬರು ಸರಿಯಾದ ಉತ್ತರ ನೀಡಲಿಲ್ಲ. ಆಗ ಸ್ವತಃ ಜೈ ಜಗದೀಶ್ ಅವರೇ ಶಂಕರ್ನಾಗ್ ಹೆಸರು ಹೇಳಿದಾಗ ಎಲ್ಲರೂ ಒಮ್ಮೆ ಬೆಕ್ಕಸ ಬೆರಗಾದರು. ಅವರ ಮಾರ್ಕೆಟ್ ಯಾವಾಗ ಬಿದ್ದಿತ್ತು ಸರ್ ಎಂದು ಎಲ್ಲರೂ ಅಚ್ಚರಿಯಿಂದ ಕೇಳಿದಾಗ, ಸುಮಾರು ಮೂರು ವರ್ಷ ಶಂಕರ್ನಾಗ್ ಅವರಿಗೆ ಮಾರ್ಕೆಟ್ ಇರಲಿಲ್ಲ. ಆಗ ಮೆಟಡೋರ್ ವ್ಯಾನ್ನಲ್ಲಿ ನಗರದ ಕ್ವೀನ್ಸ್ ಪ್ರತಿಮೆ ಬಳಿ ಕ್ಯಾಂಟಿನ್ ರನ್ ಮಾಡುತ್ತಿದ್ದರು. ಆದರೆ, ನಂತರದ ದಿನಗಳಲ್ಲಿ ಅವರೇ ಬಹುದೊಡ್ಡ ನಟನಾದರು ಎಂದು ತಿಳಿಸಿದರು. ಅಂದೇ ಮೆಟ್ರೋ ಪರಿಕಲ್ಪನೆಯನ್ನು ಮುಂದಿಟ್ಟಿದ್ದರಂತೆ, ಮೆಟ್ರೋ ಜತೆಗೆ ನಂದಿ ಬೆಟ್ಟ ಕೆಳಗಿನವರೆಗೂ ರೋಪ್ ವೇ ಮಾಡಲು ಯೋಜನೆ ಹಾಕಿಕೊಂಡಿದ್ದರು ಎಂಬ ಅಚ್ಚರಿಯ ವಿಚಾರಗಳನ್ನು ಬಹಿರಂಗಪಡಿಸಿದರು. ವಿಶೇಷ ಅಂದರೆ ಶಂಕರ್ನಾಗ್ ಅವರ ಕನಸಾಗಿದ್ದ ಮೆಟ್ರೊ ಇಂದು ಕ್ವೀನ್ಸ್ ಪ್ರತಿಮೆಯ ಮಾರ್ಗದಲ್ಲೇ ಸಾಗುತ್ತದೆ…..