Breaking News

ಶಿಕ್ಷಕರಿಗೆ ಶಿಷ್ಯವೇತನ ಅರ್ಜಿ ಭಾರ..!

ಪಾಠಕ್ಕಿಂತ ಇಲಾಖೆ ಕೆಲಸವೇ ಶಿಕ್ಷಕರಿಗೆ ಹೆಚ್ಚು....

SHARE......LIKE......COMMENT......

ಗದಗ:

ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿ ವರ್ಷ ಒಂದರ ಮೇಲೊಂದರಂತೆ ಆದೇಶ ಜಾರಿಗೊಳಿಸುತ್ತಲೇ ಇದೆ. ಪಾಠಕ್ಕಿಂತ ಇಲಾಖೆ ಕೆಲಸವೇ ಶಿಕ್ಷಕರನ್ನು ಹೈರಾಣಾಗಿಸುವಂತೆ ಮಾಡಿದೆ. ಇದರಿಂದ ಯಾವಾಗ ಮುಕ್ತಿ ಹೊಂದುತ್ತೆವೆಯೋ ಎನ್ನುವಷ್ಟರಲ್ಲಿಯೇ ಈಗ ಮತ್ತೊಂದು ಕೆಲಸ ಮಾಡುವುದು ಅನಿವಾರ್ಯವಾಗಿದೆ.

ಈ ಹಿಂದೆ 1ರಿಂದ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುವ ಮಕ್ಕಳ ಶಿಷ್ಯ ವೇತನ ಅರ್ಜಿ ಭರ್ತಿ ಮಾಡಿ ದಾಖಲೆ ಸಂಗ್ರಹಿಸಿ ಸಮಾಜ ಕಲ್ಯಾಣ ಇಲಾಖೆಗೆ ಶಿಕ್ಷಕರು ಹಸ್ತಾಂತರಿಸುತ್ತಿದ್ದರು. ಯಾವುದೇ ಗೊಂದಲವಿಲ್ಲದೇ ಈ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಈ ಬಾರಿ ಹೊಸ ನಿಯಮ ಜಾರಿಗೊಳಿಸಿದೆ. ವ್ಯಾಸಾಂಗನಿರತ ವಿದ್ಯಾರ್ಥಿಗಳ ಶಿಷ್ಯ ವೇತನ ಅರ್ಜಿಗಳನ್ನು ಆಯಾ ಶಾಲೆ ಶಿಕ್ಷಕರೇ ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕಾಗಿದೆ. ಇದು ಶಿಕ್ಷಕರಿಗೆ ನುಂಗಲಾರದ ತುತ್ತಾಗಿದೆ.

ಯಾವುದೇ ಶಾಲೆ ಮಕ್ಕಳು ಶಿಷ್ಯವೇತನದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯೋಪಾದ್ಯಾಯರಿಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಹೀಗಾಗಿ ಪ್ರತಿ ಶಾಲೆಯಲ್ಲಿನ ಅಂದಾಜು 150ರಿಂದ 200 ವಿದ್ಯಾರ್ಥಿಗಳ ದಾಖಲೆ ಸಂಗ್ರಹಿಸಿ ಸಮಾಜ ಕಲ್ಯಾಣ ಇಲಾಖೆ ಸೆ. 1ರಿಂದ ಆರಂಭಿಸಿರುವ ಎಸ್‌ಎಸ್‌ಪಿ ಕರ್ನಾಟಕ ಎನ್ನುವ ವೆಬ್‌ಸೈಟ್‌ಗೆ ಅಪ್‌ ಲೋಡ್‌ ಮಾಡಬೇಕು. ಆದರೆ ಸರ್ವರ್‌ ಸಮಸ್ಯೆಯಿಂದಾಗಿ ಶಿಕ್ಷಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಮಕ್ಕಳಿಗೆ ಪಾಠ ಮಾಡಿ ಶಾಲೆ ಮುಗಿದ ತಕ್ಷಣ ಮನೆಗೆ ಹಿಂತಿರುಗುತ್ತಿದ್ದ ಶಿಕ್ಷಕರಿಗೀಗ, ಮಕ್ಕಳ ಸ್ಕಾಲರ್‌ ಶಿಫ್‌ ಅರ್ಜಿ ಹಾಕಲು ಮಧ್ಯರಾತ್ರಿ ವರೆಗೂ ಶಾಲೆಯಲ್ಲೇ ಉಳಿಯುವಂತಹ ದುಸ್ಥಿತಿ ಬಂದೊದಗಿದೆ.

ಶಿಷ್ಯವೇತನಕ್ಕಾಗಿ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‌ಲೈನ್‌ ನಲ್ಲಿ ಅಪಲೋಡ್‌ ಮಾಡಬೇಕು ಎಂದು ಶಿಕ್ಷಣ ಇಲಾಖೆ ಶಿಕ್ಷಕರಿಗೆ ಆದೇಶಿಸಿದೆ. ಆದರೆ ಕಂಪ್ಯೂಟರ್‌ ಸೌಲಭ್ಯಗಳಿಲ್ಲ. 8ರಿಂದ 10 ಶಾಲೆಗಳನ್ನು ಸೇರಿ 1 ಕಂಪ್ಯೂಟರ್‌ ಇರುವ ಶಾಲೆಯನ್ನು ಕೇಂದ್ರವನ್ನಾಗಿ ಹಂಚಿಕೆ ಮಾಡಿದ್ದಾರೆ. ಈಗಾಗಲೇ ಸರ್ವರ ಸಮಸ್ಯೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಆ ಕೇಂದ್ರದಲ್ಲಿ ದಿನಗಟ್ಟಲೆ ವಿವಿಧ ಶಾಲೆ ಶಿಕ್ಷಕರು ಕಾಯಬೇಕಾದ ಸ್ಥಿತಿ ಎದುರಾಗಿದೆ.

ಕಳೆದ ಎರಡು ವಾರಗಳಿಂದ ಶಿಷ್ಯವೇತನ ಅರ್ಜಿ ಭರ್ತಿ ಮಾಡುವ ಭರದಲ್ಲಿರುವ ಶಿಕ್ಷಕರಿಗೆ ದಿನಂಪ್ರತಿ ಶಿಷ್ಯವೇತನ ಅರ್ಜಿಗಳ ಸ್ವೀಕಾರದ್ದೆ ಕೆಲಸ ಆಗಿದೆ. ಇದರಿಂದ ಮಕ್ಕಳ ಪಠ್ಯ ಬೋಧನೆಗೆ ಹಿನ್ನಡೆಯಾಗುತ್ತಿದೆ. ಕಳೆದ 10 ದಿನಗಳಲ್ಲಿ ಶಾಲೆ ಬಹುಪಾಲು ಶಿಕ್ಷಕರು ಶಿಷ್ಯ ವೇತನ ಅರ್ಜಿ ಭರ್ತಿ ಮಾಡುವುದರಲ್ಲೇ ತೊಡಗಿರುವುದರಿಂದ  ಪಾಠಕ್ಕೆ ಬ್ರೇಕ್‌ ಬಿದ್ದಂತಾಗಿದೆ……