ವಿಜಯಪುರ:
ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ.16 ಯೋಗಾಪುರ ಬಡಾವಣೆಯಲ್ಲಿ ಕನಿಷ್ಟ ಮೂಲ ಸೌಲಭ್ಯಗಳೂ ಇಲ್ಲದೇ ಜನ ಬೇಸತ್ತು ಹೋಗಿದ್ದಾರೆ.
ಯೋಗಾಪುರ ಬಡಾವಣೆ ಸುಮಾರು 8 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು, ನಗರಕ್ಕಿಂತ ಜಾಸ್ತಿ ದೂರವೇನಿಲ್ಲ. ಆದರೂ ಈ ಬಡಾವಣೆ ಸಮಸ್ಯೆಗಳ ಆಗರವಾಗಿದೆ. ಇಲ್ಲಿನ ಜನರಿಗೆ ಸಂಚರಿಸುವುದಕ್ಕೆ ಸುಸಜ್ಜಿತವಾದ ರಸ್ತೆಗಳಿಲ್ಲ, ಬೀದಿ ದೀಪಗಳೂ ಇಲ್ಲ, ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ, ಒಳ ಚರಂಡಿ ವ್ಯವಸ್ಥೆ ಇಲ್ಲ, ಬಯಲು ಶೌಚಾಲಯ ಇನ್ನೂ ಹೋಗಿಲ್ಲ. ತ್ಯಾಜ್ಯ ನಿರ್ವಹಣೆ ಮಾಡುವುದಿಲ್ಲ. ಹೇಳೋದಕ್ಕೆ ಹೊರಟ್ರೆ ಸಮಸ್ಯೆಗಳ ಸಾಲೇ ಇದೆ.
ಬಡಾವಣೆಯ ಮನೆಯ ಎದುರುಗಡೆ ಇರುವ ದಾರಿಗಳ ಮಧ್ಯೆ ಮೀನು ಸಾಕಾಣಿಕೆ ಮಾಡಬಹುದೇನೋ. ಆ ಪರಿಯಲ್ಲಿ ನೀರಿನ ಹೊಂಡಗಳು ಕಂಡುಬರುತ್ತವೆ. ಕಾಲರಾ, ಚಿಕನ್ ಗುನ್ಯಾ, ಹಂದಿ ಜ್ವರ, ವಾಂತಿ ಭೇದಿ, ತಲೆನೋವು, ಮುಂತಾದ ಸಾಂಕ್ರಾಮಿಕ ರೋಗಗಳನ್ನು ಆಮಂತ್ರಣ ಕೊಟ್ಟು ಕರೆಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ.
ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಸಾಕಷ್ಟು ಹಣ ಪಾಲಿಕೆಯಿಂದ ಬಂದಿದೆ. ಆದರೆ ಕೆಲಸ ಮಾತ್ರ ಶೂನ್ಯ. ಇಲ್ಲಿನ ಪಾಲಿಕೆಯ ಸದಸ್ಯರು ತಮಗೆ ಬೇಕಾದ ಬಡಾವಣೆಗಳನ್ನು ಮಾತ್ರ ಅಭಿವೃದ್ಧಿ ಮಾಡ್ತಾರೆ. ನಿವಾಸಿಗಳು ಏನಾದರೂ ಸಮಸ್ಯೆಗಳನ್ನು ಹೇಳಲು ಹೋದರೆ ನೀವು ನನಗೆ ಓಟು ಹಾಕಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ ಎಂದು ಬಡಾವಣೆಯ ಜನರು ಗಂಭೀರ ಆರೋಪವನ್ನು ಮಾಡಿದ್ದಾರೆ.
ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ವಿಜಯಪುರವೂ ಒಂದು. ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ನಗರದ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಅಲ್ಲಿನ ಜನರು ಆಗ್ರಹಿಸುತ್ತಿದ್ದಾರೆ……