ರಾಮನಗರ:
ಅಪ್ಪ-ಮಕ್ಕಳು ಸಾವಿನ ಮಾತು ಬಿಟ್ಟು ಅಭಿವೃದ್ಧಿ ಬಗ್ಗೆ ಚಿಂತಿಸಬೇಕು. ಅದನ್ನು ಬಿಟ್ಟು ಸಾವನ್ನು ನೆಪವಾಗಿಟ್ಟುಕೊಂಡು ವೋಟು ಗಳಿಸುವ ಅನುಕಂಪದ ತಂತ್ರ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ನಡೆಸಿದ ಅವರು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡಬೇಕು. ಅದನ್ನು ಬಿಟ್ಟು ಸಾವಿನ ಕುರಿತು ಮಾತನಾಡಬಾರದು. ಯಾರು ಸಹ ಅವರ ಸಾವನ್ನು ಬಯಸಬಾರದು. ಇದು ದುಃಖಕರ ಸಂಗತಿಯಾಗಿದೆ ಎಂದರು.
ಉಪ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲುವ ಉದ್ದೇಶದಿಂದ ಸಾವಿನ ವಿಚಾರ ಕೂಡ ಮತ ಗಳಿಕೆ ತಂತ್ರವಾಗುತ್ತಿರುವುದು ವಿಪರ್ಯಾಸವಾಗಿದ್ದು, ಅನುಕಂಪ ಗಿಟ್ಟಿಸುವ ಸಾಧನವಾಗಿದೆ ಎಂದು ವ್ಯಂಗ್ಯವಾಡಿದರು.ಚುನಾವಣೆಯಲ್ಲಿ ಮತ ಗಳಿಕೆಗಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿದು ಪ್ರಚಾರ ಮಾಡುತ್ತಾರೆ ಎಂದ ಅವರು, ಹೀಗೆ ಸಾವಿನ ಬಗ್ಗೆ ಮಾತನಾಡುವವರನ್ನ ತಡೆಯಲು ಸಾಧ್ಯವಿಲ್ಲ. ಅಂಥವರಿಗೆ ನಾವೇನೂ ಹೇಳಲು ಸಾಧ್ಯವಿಲ್ಲ ಎಂದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ನಾಯಕರ ಮಟ್ಟಕ್ಕೆ ಸೀಮಿತವಾಗಿದ್ದು, ಬಿಜೆಪಿ ಮತ್ತು ಜನರ ನಡುವೆ ಮೈತ್ರಿಯಾಗುವ ವಿಶ್ವಾಸವಿದೆ. ನಮ್ಮ ಅಭ್ಯರ್ಥಿ ಚಂದ್ರಶೇಖರ್ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು….