Breaking News

ಚಂಡಮಾರುತದ ಅಬ್ಬರಕ್ಕೆ ನೂರಾರು ಗ್ರಾಮಗಳು ಜಲಾವೃತ..!

ಇನ್ನೂ 6 ದಿನಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ....

SHARE......LIKE......COMMENT......

ಬೆಂಗಳೂರು:

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ದಕ್ಷಿಣ ಭಾರತದ ಕರಾವಳಿ ತೀರಕ್ಕೆ ಬುರೇವಿ ಚಂಡಮಾರುತ ಅಪ್ಪಳಿಸಿದೆ. ಇದರಿಂದ ಇನ್ನೂ 6 ದಿನಗಳ ಕಾಲ ಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 2-3 ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಇಂದು ಕೂಡ ಮಳೆ ಮುಂದುವರೆಯುವ ಸಾಧ್ಯತೆಯಿದೆ. ರಾಜ್ಯದ ಕರಾವಳಿ ತೀರ ಹಾಗೂ ದಕ್ಷಿಣ ಒಳನಾಡಿನಲ್ಲಿ ಡಿ. 12ರವರೆಗೂ ಮಳೆ ಸುರಿಯಲಿದೆ.

ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ದಾವಣಗೆರೆ, ಕೋಲಾರ, ಕೊಡಗು, ಮಂಡ್ಯ, ಮೈಸೂರು, ತುಮಕೂರು, ರಾಮನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಇಂದಿನಿಂದ 6 ದಿನಗಳ ಕಾಲ ಅಂದರೆ ಡಿ. 12ರವರೆಗೂ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಇನ್ನು ಮೂರು ದಿನ ಬೆಂಗಳೂರಿನಲ್ಲಿ ಗರಿಷ್ಠ 24 ಹಾಗೂ ಕನಿಷ್ಟ 19 ಡಿಗ್ರಿ ಸೆಲ್ಷಿಯಸ್ ತಾಪಮಾನ ಇರಲಿದ್ದು, ಚಳಿ ಹೆಚ್ಚಾಗಲಿದೆ. ಜೊತೆಗೆ ತುಂತುರು ಮಳೆಯೂ ಸುರಿಯು ಸಾಧ್ಯತೆ ಇರುವುದರಿಂದ ಬೆಂಗಳೂರಿನಲ್ಲಿ ಚಳಿಯ ಪ್ರಮಾಣ ಹೆಚ್ಚಾಗಲಿದೆ.

ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಹಾವೇರಿ, ಗದಗ, ಧಾರವಾಡ, ಹುಬ್ಬಳ್ಳಿ ಭಾಗದಲ್ಲಿ ಕೂಡ ಡಿ. 10ರಿಂದ 12ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ಕೂಡ ಸಂಜೆಯ ಬಳಿಕ ಮಳೆಯಾಗುವ ಸಾಧ್ಯತೆಯಿದೆ. ಬುರೇವಿ ಚಂಡಮಾರುತದ ಹಾವಳಿಯಿಂದ ತಮಿಳುನಾಡಿನ ದಕ್ಷಿಣ ಹಾಗೂ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕಡ್ಡಲೂರ್ ಜಿಲ್ಲೆಯಲ್ಲಿ 66,000ಕ್ಕೂ ಅಧಿಕ ಜನರನ್ನು ಈಗಾಗಲೇ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 5,000 ಜನರನ್ನು ರಾಮನಾಥಪುರಕ್ಕೆ ಸ್ಥಳಾಂತರಿಸಲಾಗಿದೆ.

ತಮಿಳುನಾಡಿನ ಕನ್ಯಾಕುಮಾರಿ, ತಿರುನೆಲ್ವೇಲಿ, ತೂತುಕುಡಿ, ರಾಮನಾಥಪುರಂ, ಸಿವಗಂಗೈ ಮತ್ತು ಕೇರಳದ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಭಾಗದಲ್ಲಿ ಭಾರೀ ಮಳೆಯಾಗಿತ್ತು. ಇದರಿಂದ ಕೇರಳದಲ್ಲೂ ಅನೇಕ ಕಡೆ ಮನೆಗಳು ಮುಳುಗಡೆಯಾಗಿವೆ. ಹೀಗಾಗಿ, ಇಂದು ಕೇರಳದ 4 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಕೇರಳದ ಪಥನಾಂತಿಟ್ಟ, ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡು, ಕೇರಳದಲ್ಲಿ ಬುರೇವಿ ಚಂಡಮಾರುತ ಅಪ್ಪಳಿಸಿದೆ. ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಹಲವು ಭಾಗಗಳಲ್ಲಿ ಬುರೇವಿ ಚಂಡಮಾರುತದ ಪರಿಣಾಮದಿಂದ ಮಳೆಯಾಗುತ್ತಿದೆ. ಶ್ರೀಲಂಕಾದಿಂದ ತಮಿಳುನಾಡು, ಕೇರಳದ ಕರಾವಳಿಯನ್ನು ಪ್ರವೇಶಿಸಿದ್ದ ಈ ಚಂಡಮಾರುತದ ಪರಿಣಾಮದಿಂದ ತಮಿಳುನಾಡೊಂದರಲ್ಲೇ 7 ಜನರು ಸಾವನ್ನಪ್ಪಿದ್ದಾರೆ. ಉಗ್ರರೂಪ ತಾಳಿದ ಚಂಡಮಾರುತದ ಅಬ್ಬರಕ್ಕೆ ನೂರಾರು ಗ್ರಾಮಗಳು ಜಲಾವೃತವಾಗಿವೆ.

ತಮಿಳುನಾಡಿನ ಕಡ್ಡಲೂರ್ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಗ್ರಾಮಗಳು ನೀರಿನಿಂದ ಮುಳುಗಡೆಯಾಗಿದೆ. ಮಳೆಯಿಂದ ಮೃತಪಟ್ಟವರ ಕುಟುಂಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಮನೆ ಹಾಗೂ ಜಾನುವಾರುಗಳನ್ನು ಕಳೆದುಕೊಂಡವರಿಗೆ ಕೂಡ ಪರಿಹಾರ ಘೋಷಿಸಲಾಗಿದೆ. ಹಸುವನ್ನು ಕಳೆದುಕೊಂಡವರಿಗೆ 30 ಸಾವಿರ ರೂ., ಕರುವಿಗೆ 16 ಸಾವಿರ ಹಾಗೂ ಮೇಕೆಯನ್ನು ಕಳೆದುಕೊಂಡವರಿಗೆ 3,000 ಪರಿಹಾರ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ……