ಬೆಂಗಳೂರು:
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತರಗತಿಗಳು ಆರಂಭವಾಗಿಲ್ಲ. ಆಗಲೇ ಪರೀಕ್ಷೆ ಬಗ್ಗೆ ಚರ್ಚೆಗಳು ನಡೆದಿವೆ. ಇದೀಗ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ತರಗತಿಗಳ ಆರಂಭದ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ ತರಗತಿ ಆರಂಭದ ಬಗ್ಗೆ ಈ ತಿಂಗಳ ಅಂತ್ಯದಲ್ಲಿ ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಬೇಕೆಂದು ದಿನಾಂಕ 02-12-2020ರಂದು ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರೊಂದಿಗೆ ಚರ್ಚೆಯಲ್ಲಿ ಭಾಗವವಹಿಸಿದ್ದ ಎಲ್ಲ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದ್ದು, ದಿನಾಂಕ 23-11-2020ರಂದು ಮುಖ್ಯಮಂತ್ರಿಗಳ ಅಧ್ಯಕ್ಷೆತೆಯ ಸಭೆಯಲ್ಲೂ ಚರ್ಚಿಸಲಾಗಿದೆ. ಈ ಸಭೆಯಲ್ಲಿ ಚರ್ಚಿಸಲಾದಂತೆ ಈ ಮಾಸಾಂತ್ಯಕ್ಕೆ ಸಭೆ ಏರ್ಪಡಿಸಿಲು ದಿನಾಂಕವನ್ನು ನಿಗದಿಪಡಿಸಲು ಕ್ರಮವಹಿಸುವಂತೆ ಸೂಚಿಸಿದ್ದಾರೆ.
ಸಚಿವರ ಸೂಚನೆಯಂತೆ ಈ ತಿಂಗಳ ಅಂತ್ಯದಲ್ಲಿ ಶಿಕ್ಷಣ ಸಚಿವ ನೇತೃತ್ವದಲ್ಲಿ ಶಿಕ್ಷಣ ತಜ್ಞರು ಸೇರಿದಂತೆ ವಿವಿಧ ತಜ್ಞರೊಂದಿಗೆ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ತರಗತಿಗಳ ಆರಂಭದ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದಾರೆ. ಒಟ್ಟಿನಲ್ಲಿ ಈ ಸಭೆ ಮಹತ್ವದ್ದಾಗಿದ್ದು, ಏನೆಲ್ಲಾ ತೀರ್ಮಾನಗಳು ಆಗುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ…….