ತುಮಕೂರು:
ಶಿರಾ ಉಪಸಮರದ ರಣಕಣದಲ್ಲಿ ಬುಧವಾರ ಘಟಾನುಘಟಿ ನಾಯಕರ ಅಬ್ಬರದ ಪ್ರಚಾರ ನಡೆದಿದೆ. ಕಾಂಗ್ರೆಸ್ ನಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಪ್ರಚಾರ ನಡೆಸಿದರೆ, ಜೆಡಿಎಸ್ ನಿಂದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಪ್ರಚಾರ ನಡೆಸಿದ್ದಾರೆ. ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಪರ ಸಚಿವರಾದ ಶ್ರೀರಾಮುಲು ಹಾಗೂ ವಿ.ಸೋಮಣ್ಣ ಪ್ರಚಾರ ನಡೆಸಿದ್ದು, ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪಗಳ ಸುರಿಮಳೆಗೈದಿದ್ದಾರೆ.
ಶಿರಾ ಉಪಚುನಾವಣೆ ಸಮೀಪಸುತ್ತಿದ್ದು, ಕ್ಷೇತ್ರದಲ್ಲಿ ಪ್ರಚಾರದ ಅಬ್ಬರ ಜೋರಾಗಿದೆ. ಮೂರು ಪಕ್ಷಗಳ ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರು, ಕ್ಷೇತ್ರದಲ್ಲೇ ಬೀಡುಬಿಟ್ಟು ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ನಿನ್ನೆಯಿಂದ ಶಿರಾದಲ್ಲೇ ಬೀಡುಬಿಟ್ಟು ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರ ಪ್ರಚಾರ ನಡೆಸ್ತಿರೋ ಕೆಪಿಸಿಸಿ ಅಧ್ಯಕ್ಷ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಇಂದೂ ಕೂಡ ಪಟ್ಟನಾಯಕನಹಳ್ಳಿ, ಕೊಟ್ಟ, ನಿಡುಗಟ್ಟೆ ಸೇರಿದಂತೆ ಅನೇಕ ಕಡೆ ರೋಡ್ ಶೋ ನಡೆಸಿ ಅಬ್ಬರದ ಪ್ರಚಾರ ನಡೆಸಿದ್ದಾರೆ.
ಪ್ರಚಾರಕ್ಕೂ ಮುನ್ನ ಶಿರಾದ ಟಿ.ಬಿ.ಜಯಚಂದ್ರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್, ಬಿಜೆಪಿ ವಿರುದ್ದ ಗುಡುಗಿದ್ದಾರೆ. ಶಿರಾ ಉಪಚುನಾವಣೆಯ ಇಂಟರ್ನಲ್ ಸರ್ವೇ ಮಾಡಿಸಿದ್ದು, 44% ನಮ್ಮ ಪಾರ್ಟಿ ಪರವಾಗಿ ಇದೆ, 21% ಇನ್ನೊಂದು ಪಾರ್ಟಿಗೆ ಇದ್ದು, 22% ಮತ್ತೊಂದು ಪಾರ್ಟಿಗೆ ಇದೆ ಅಂದಿದ್ದಾರೆ.
ಇಷ್ಟು ದಿನ ಅಬ್ಬರದ ಪ್ರಚಾರವಿಲ್ಲದೇ ಸೊರಗಿದ್ದ ಜೆಡಿಎಸ್ ಪಾರ್ಟಿಗೆ ದೇವೇಗೌಡರು, ಕುಮಾರಸ್ವಾಮಿ ಅವರ ಎಂಟ್ರಿ ಇಂದ ಟಾನಿಕ್ ಸಿಕ್ಕಂತಾಗಿದೆ. ಶಿರಾದ ದೊಡ್ಡ ಆಲದಮರದಲ್ಲಿ ಶಾಸಕ ಗೌರಿಶಂಕರ್ ಅವ್ರ ಚುನಾವಣಾ ಪ್ರಚಾರದ ಕಚೇರಿ ಉದ್ಘಾಟಿಸಿ, ಕಚೇರಿಯಲ್ಲಿ ನಡೆದ ಹೋಮಕ್ಕೆ ಪೂರ್ಣಾಹುತಿ ನೆರವೇರಿಸಿದ್ರು. ಬಳಿಕ ಶಿರಾದ ಚಂಗಾವರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡರು. ಎರಡೂ ರಾಷ್ರ್ಟೀಯ ಪಕ್ಷಗಳು ಜೆಡಿಎಸ್ ಪ್ರಾದೇಶಿಕ ಪಕ್ಷವನ್ನು ಸಂಪೂರ್ಣವಾಗಿ ನಾಶ ಮಾಡ್ತೀವಿ ಅನ್ನೋ ಪಣತೊಟ್ಟಿದ್ದು, ಆದರೆ ಮಹಾಜನತೆ ಈ ಪ್ರಾದೇಶಿಕ ಪಕ್ಷದ ಅವಶ್ಯಕತೆಯನ್ನ ಅರ್ಥ ಮಾಡಿಕೊಂಡಿದ್ದಾರೆ ಅಂತಾ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.
ಇನ್ನು ದೊಡ್ಡ ಆಲದಮರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತಾನಾಡಿದ ಹೆಚ್.ಡಿ.ಕುಮಾರಸ್ವಾಮಿ, ನಮ್ಮಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ ಮನೆಗೆ ಬಿಜೆಪಿ ಡಿಸಿಎಂ ಆಗಮಿಸಿ ಹಲವಾರು ಆಮಿಷಗಳನ್ನ ನೀಡಿ ಅವರ ಪಕ್ಷಕ್ಕೆ ಕರೆದಿದ್ರು, ಆದ್ರೇ ನಮ್ಮ ಪಕ್ಷಕ್ಕೆ ದ್ರೋಹ ಮಾಡಬಾರದು ಅಂತಾ ಜೆಡಿಎಸ್ ನಿಂದಲೇ ಸ್ಪರ್ಧೆ ಮಾಡಿದ್ದಾರೆ ಅಂದರು. ಸಿಎಂ ಮಗ ವಿಜಯೆಂದ್ರ ಹಣದ ತೈಲಿಯನ್ನೇ ಇಟ್ಟುಕೊಂಡು ಶಿರಾಗೆ ಬಂದಿದ್ದಾರೆ, ಯುವಕರಿಗೆ ಆಮಿಷವೊಡ್ಡಿ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದು, ನಿಮ್ಮನ್ನು ಕೊಂಡುಕೊಳ್ತೀವಿ ಎನ್ನುವ ವಿಜಯೇಂದ್ರ ಉದ್ದಟತನದ ಮಾತುಗಳಿಗೆ ಉತ್ತರ ಕೊಡಿ ಅಂತಾ ವಿಜಯೇಂದ್ರ ವಿರುದ್ದ ಹೆಚ್ಡಿಕೆ ಗುಡುಗಿದ್ದಾರೆ.
ಸಚಿವರಾದ ಸೋಮಣ್ಣ ಹಾಗೂ ಶ್ರೀರಾಮುಲು ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಮತಯಾಚನೆ ಮಾಡಿದ್ದಾರೆ. ಒಟ್ಟಾರೆ ಮೂರು ಪಕ್ಷಗಳ ಘಟಾನುಘಟಿ ನಾಯಕರು ಶಿರಾದ ಉಪಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದು, ಅಬ್ಬರದ ಪ್ರಚಾರದಿಂದ ದೂರ ಉಳಿದಿದ್ದ ಜೆಡಿಎಸ್ ಕೂಡ ದೇವೇಗೌಡರ ಆಗಮನದಿಂದ ಫೀನಿಕ್ಸ್ ನಂತೆ ಎದ್ದು ನಿಂತಿದೆ. ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮತಬೇಟೆಗೆ ತಮ್ಮದೇ ಕಾರ್ಯತಂತ್ರ ರೂಪಿಸುವುದರಲ್ಲಿ ಎಲ್ಲಾ ಪಕ್ಷದ ನಾಯಕರು ನಿರತರಾಗಿದ್ದಾರೆ……