ಕಣ್ಣೀರಿನಿಂದ ಜನರನ್ನು ಮರಳು ಮಾಡುತ್ತಿರುವ ನಾಯಕರನ್ನು ನಂಬಬೇಡಿ. ಅವರಿಂದ ಅಭಿವೃದ್ಧಿ ಮರೀಚಿಕೆಯಾಗಲಿದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗುಡುಗಿದರು.ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಮಲ್ಲಿಗೆಮೆಟ್ಟಿಲು ಗ್ರಾಮದ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಿಜೆಪಿ ಚುನಾವಣಾ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಅಭಿವೃದ್ಧಿ ಮರೆತು ಕೇವಲ ಕಣ್ಣೀರಿನ ನಾಟಕವಾಡುವ ಇವರಿಗೆ ಜನತೆ ತಕ್ಕಪಾಠ ಕಲಿಸಬೇಕು. ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು ಸಾವಿರ ಅಡಿ ಕೊರೆಸಿದರೂ ನೀರು ಸಿಗದಂತಾಗಿದೆ. ಇಷ್ಟು ದಿನ ಅಭಿವೃದ್ಧಿ ಕೆಲಸ ಮಾಡದೇ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.ಜಿಲ್ಲಾ ಬಿಜೆಪಿ ಘಟಕದ ಎಂ.ರುದ್ರೇಶ್ ಮಾತನಾಡಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಗೂಂಡಾ ಮತ್ತು ಡ್ರಾಮಾ ಸರ್ಕಾರವಾಗಿದ್ದು ಜನತೆಗೆ ಮಸಿ ಬಳಿಯುತ್ತಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದು, ಇವರ ಮೋಸಕ್ಕೆ ಬಲಿಯಾಗಬೇಡಿ. ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲದ ಈ ಸರ್ಕಾರದಲ್ಲಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಮಾತನಾಡಿ, ಎಲ್ಲಿಂದಲೋ ಬಂದವರಿಗೆ ಮಣೆ ಹಾಕಬೇಡಿ. ನಿಮ್ಮ ಮನೆ ಮಗನಿಗೆ ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗುವ ನನಗೆ ಆಶೀರ್ವಾದ ಮಾಡಿ ಎಂದು ಮತಯಾಚಿಸಿದರು……