Breaking News

ಕ್ರೀಡಾ ಸಮಿತಿ ಅಧ್ಯಕ್ಷನ ವಿರುದ್ಧ ಅಸಮಾಧಾನ..!

ಮೇಯರ್ ಕಪ್ ಕಾರ್ಯನಿರ್ವಹಣೆ ಕುರಿತು ಆಕ್ರೋಶ....

SHARE......LIKE......COMMENT......

ಹುಬ್ಬಳ್ಳಿ:

ಮೇಯರ್ ಕಪ್-ಕ್ರೀಡಾಕೂಟ ಆಯೋಜನೆಯಲ್ಲಿ ಕ್ರೀಡಾ ಸಮಿತಿ ಅಧ್ಯಕ್ಷ ಸದಸ್ಯ ಶಿವಾನಂದ ಮುತ್ತಣ್ಣವರ ಕಾರ್ಯನಿರ್ವಹಣೆ ಕುರಿತು ಹು-ಧಾ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಗೊಂಡಿತು.

ಸೋಮವಾರ ನಡೆದ ಸಭೆಯಲ್ಲಿ ಮಧ್ಯಾಹ್ನ ಈ ಕುರಿತು ಚರ್ಚೆಯ ವೇಳೆ ಮುತ್ತಣ್ಣವರ ಹಾಜರಿರಲಿಲ್ಲ. ಸಂಜೆ ಹೊತ್ತಿಗೆ ಹಾಜರಾದ ಅವರು ಉದ್ಧಟತನದ ಉತ್ತರ ನೀಡಿ ಸಭೆಯಿಂದ ಹೊರ ನಡೆದ ಪ್ರಸಂಗ ನಡೆಯಿತು.

ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಗಣೇಶ ಟಗರಗುಂಟಿ, ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪಾಲಿಕೆ ಎಷ್ಟು ಹಣ ಖರ್ಚು ಮಾಡುತ್ತಿದೆ? ಕ್ರೀಡಾಕೂಟಕ್ಕೆ ಎಷ್ಟು ಹಣ ಕೊಟ್ಟಿದ್ದೀರಿ ? ಎಂದು ವಿವರ ಕೇಳಿದರು.

ಕ್ರೀಡಾ ಸಮಿತಿ ಅಧ್ಯಕ್ಷರು, ಆರೋಗ್ಯ ನಿರೀಕ್ಷಕರು, ಲೆಕ್ಕಾಧಿಕಾರಿ ಹಾಗೂ ಕಂಟ್ರೋಲ್ ರೂಮ್​ನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ವೀರಣ್ಣ ಸವಡಿ, ಸ್ವಚ್ಛತೆಗೆ ಸಂಬಂಧಿಸಿದಂತೆ ಕರೆ ಮಾಡಿದರೆ ಕ್ರಿಕೆಟ್ ಆಡುತ್ತಿದ್ದೇವೆ ಎಂದು ಆರೋಗ್ಯ ನಿರೀಕ್ಷಕರು ಹೇಳುತ್ತಿದ್ದಾರೆ. ಕಂಟ್ರೋಲ್ ರೂಮ್ವರು ಕರೆ ಮಾಡಿ ನಿಮ್ಮ ಕ್ರಿಕೆಟ್ ಟೀಮ್ ಎಲ್ಲಿ ಎಂದು ಕೇಳುತ್ತಿದ್ದಾರೆ. ವಾರ್ಡ್​ಗೆ ಒಂದರಂತೆ ಕ್ರಿಕೆಟ್ ಟೀಮ್ ಮಾಡಿದಂತಿದೆ. ಇವರಿಗೆ ಹೇಳುವವರು-ಕೇಳುವವರು ಯಾರೂ ಇಲ್ಲವಾ? ಎಂದರು.

ಪಾಲಿಕೆಗೆ ಹೆಸರು ಬರುವ ಹಾಗೇ ಕ್ರೀಡಾಕೂಟ ನಡೆಸಲಿ. ವೈಯಕ್ತಿಕವಾಗಿ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪಾಲಿಕೆ ಹಣ ಬಳಕೆ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ಸಿನ ಅಲ್ತಾಫ್ ಕಿತ್ತೂರ ಆಕ್ಷೇಪ ವ್ಯಕ್ತಪಡಿಸಿದರು. ಕ್ರೀಡೆಯನ್ನು ವ್ಯವಸ್ಥಿತವಾಗಿ ನಡೆಸಬೇಕು. ಒಬ್ಬನೇ ಮಾಸ್ಟರ್ ಪೀಸ್ ಆಗುವುದು ಬೇಡ ಎಂದು ಸುಭಾಷ ಶಿಂದೆ ಹೇಳಿದರು.

ಮುತ್ತಣ್ಣವರ ಕ್ರೀಡಾ ಸಮಿತಿ ಅಧ್ಯಕ್ಷ ಸ್ಥಾನ ಬೇಕು ಎಂದು ಪಟ್ಟು ಹಿಡಿದರು. ಅದಕ್ಕೆ ಕೊಟ್ಟಿದ್ದೇವೆ. ಸಮಸ್ಯೆ ಆಗಿದೆ ಎಂಬುದು ಗೊತ್ತಿದೆ. ಅಧಿಕಾರಿಗಳು ನಿಗಾ ವಹಿಸಬೇಕು. ಕ್ರೀಡಾ ಸಮಿತಿಗೆ 1.5 ಲಕ್ಷ ರೂ. ನೀಡಿದ್ದೇವೆ. ಹೆಚ್ಚೆಂದರೆ 2 ಅಥವಾ 2.25 ಲಕ್ಷ ರೂ. ವರೆಗೆ ಖರ್ಚು ಮಾಡಬಹುದು. ಅದಕ್ಕಿಂತ ಹೆಚ್ಚಾದರೆ ಹಣ ಕೊಡುವುದಿಲ್ಲ. ತಾಯಿ ಭುವನೇಶ್ವರಿ ಮೆರವಣಿಗೆ ವೇಳೆ ಹೆಲಿಕಾಪ್ಟರ್​ನಿಂದ ಪುಷ್ಪವೃಷ್ಟಿ ಮಾಡುವ ಕಾರ್ಯಕ್ರಮ ಹಾಕಿಕೊಂಡಿಲ್ಲ ಎಂದು ಮೇಯರ್ ಸುಧೀರ ಸರಾಫ್ ಸ್ಪಷ್ಟನೆ ನೀಡಿದರು.

ಪಾಲಿಕೆ ರಾಜ್ಯೋತ್ಸವ ಕ್ರೀಡಾಕೂಟಕ್ಕೆ ಸಹಕಾರ ನೀಡುವಂತೆ, ಸದಸ್ಯರಿಗೆ ಕರೆ ಮಾಡುವಂತೆ ಕಂಟ್ರೋಲ್ ರೂಮ್ ಯಾವುದೇ ಆದೇಶ ನೀಡಿಲ್ಲ. ಸ್ವಚ್ಛತೆ ಕೆಲಸ ಬಿಟ್ಟು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಿ ಎಂದು ಆರೋಗ್ಯ ನಿರೀಕ್ಷಕರಿಗೆ ಹೇಳಿಲ್ಲ ಎಂದು ಆಯುಕ್ತ ಶಕೀಲ್ ಅಹ್ಮದ್ ಉತ್ತರ ನೀಡಿದರು……