ನ್ಯಾಯಾಲಯ ಆದೇಶದಂತೆ ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಿ ಜಾರಿಗೊಳಿಸುವ ಮೂಲಕ ಪರಿಸರ ಹಾನಿ ತಡೆಯುವುದರ ಜತೆಗೆ ಆರೋಗ್ಯಕರ ಜೀವನ ನಡೆಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಹೇಳಿದರು.
ನವೆಂಬರ್ 1ರಿಂದ ಕಲಬುರಗಿಯಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಕೆ ಸಂಪೂರ್ಣ ನಿಷೇಧಿಸಿದ್ದರಿಂದ ಎಚ್ಕೆಸಿಸಿಐ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣ ಹಾಗೂ ವ್ಯಾಪಾರಿಗಳು ಮತ್ತು ವರ್ತಕರ ಸಭೆ ಉದ್ಘಾಟಿಸಿ, ಜನರು ಬದಲಾವಣೆಗೆ ಮೈಯೊಡ್ಡಿಕೊಳ್ಳುತ್ತಾರೆ. ಅದಕ್ಕೆ ಪೂರಕವಾಗಿ ವ್ಯಾಪಾರಿಗಳು, ವರ್ತಕರು ನಿಯಮ ಪಾಲಿಸಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಗೆ ಸಹಕಾರ ನೀಡಬೇಕು ಎಂದು ಕೋರಿದರು.
50 ಮೈಕ್ರಾನ್ಗಿಂತ ಕಮ್ಮಿ ಇರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಬಳಕೆ ನಿಷೇಧಿಸಲಾಗಿದೆ. ಆದರೆ ಸಮಯಾಕಾಶ ನೀಡಲು ಆಕ್ಷೇಪವಿಲ್ಲ. ಆದರೆ ಇಂದಲ್ಲ ನಾಳೆ ಜಾರಿಗೊಳಿಸಬೇಕು, ಹೀಗಾಗಿ ಈಗಿನಿಂದಲೇ ಅನುಷ್ಠಾನಗೊಳಿಸಲು ವ್ಯಾಪಾರಿಗಳು ಮುಂದಾಗಬೇಕು ಎಂದು ಡಿಸಿ ಹೇಳಿದರು.
ರಾಜ್ಯದಲ್ಲೇ ಅತಿ ಹೆಚ್ಚು ತಾಪಮಾನ 44 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಗರ ಕಲಬುರಗಿ. ಅಲ್ಲದೆ ಪರಿಸರ ಮಾಲಿನ್ಯ ಹೆಚ್ಚಿರುವ ಕೆಂಪು ಪಟ್ಟಿಯಲ್ಲಿರುವ ರಾಜ್ಯದ 4 ನಗರಗಳಲ್ಲಿ ಕಲಬುರಗಿಗೆ 3ನೇ ಸ್ಥಾನವಿದೆ. ಹೀಗಾಗಿ ಪರಿಸರ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿಗೊಳಿಸುವುದು ಜರೂರಿ. 2015ರಿಂದ ಬರ ಎದುರಿಸುತ್ತಲೇ ಇದ್ದೇವೆ. ಈ ಸಲ ಸಂಪೂರ್ಣ ಬರ ಬಂದಿದೆ. ಇದಕ್ಕೆ ತಾಪಮಾನ ಏರಿಕೆ, ಪರಿಸರ ಕಲುಷಿತವೇ ಕಾರಣ. ಹೀಗಾಗಿ ಕೃಷಿ ಬಿಕ್ಕಟ್ಟು ಹೋಗಲಾಡಿಸಲು ಪರಿಸರ ರಕ್ಷಣೆ ಮಾಡಬೇಕಾಗಿದೆ. ಪರಿಸರ ಮಾಲಿನ್ಯ ನಿಯಂತ್ರಿಸಲು ಕ್ರಿಯಾಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ. ಆ ನಿಟ್ಟಿನಲ್ಲಿ ಪೂರಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು…..